ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಪೊಲೀಸ್ ವ್ಯವಸ್ಥೆ ಸುಸಜ್ಜಿತಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲಾಗಿದೆ ಎಂದು ರಾಜ್ಯದ ಕಾನೂನು ಸುವ್ಯವಸ್ಥೆಗೆ ರಾಜ್ಯಪಾಲರು ಶಹಬ್ಬಾಸ್ ಗಿರಿ ನೀಡಿದ್ದಾರೆ.
ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ರಾಜ್ಯಪಾಲ ವಜುಭಾಯಿ ವಾಲಾ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿನ ಅವರು, ಸಿಎಎ ಕುರಿತು ಪರ-ವಿರೋಧ ಪ್ರತಿಭಟನೆ, ಗೋಲಿಬಾರ್ ಘಟನೆ, ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ, ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಜೀವ ಬೆದರಿಕೆ ಇದೆ ಎನ್ನುವ ಆರೋಪಗಳ ನಡುವೆಯೂ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಕಾರ್ಯ ವೈಖರಿಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಿಡುಗಡೆಯಾದ ಉತ್ತಮ ಆಡಳಿತ ನಿರ್ವಹಣಾ ಸೂಚ್ಯಂಕದಲ್ಲಿ ರಾಜ್ಯ ಮೂರನೇ ಸ್ಥಾನ ಪಡೆಯುವುದರೊಂದಿಗೆ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸಂಭವಿಸಿದ ತೀವ್ರ ಮಳೆ ಹಾನಿಯಿಂದ ಸಂತ್ರಸ್ತರಾದವರ ನೆರವಿಗೆ ಸರ್ಕಾರ ಧಾವಿಸಿದೆ. ಮನೆ ನಿರ್ಮಾಣಕ್ಕೆ ₹5 ಲಕ್ಷ, ದುರಸ್ಥಿಗೆ ₹50 ಸಾವಿರ ನೆರವು ಮಂಜೂರು ಮಾಡಲಾಗಿದೆ. ಎನ್ಡಿಆರ್ಎಫ್ ಮಾನದಂಡಕ್ಕಿಂತ ಹೆಚ್ಚುವರಿ ಅಗತ್ಯತೆಯನ್ನು ರಾಜ್ಯ ಸರ್ಕಾರ ಭರಿಸಿದೆ. ಭಾರತದ ರಾಜ್ಯ ಅರಣ್ಯ ವರದಿಯಲ್ಲಿ ಕರ್ನಾಟಕ ಅರಣ್ಯ ಪ್ರದೇಶ ಹೆಚ್ಚಿಸಿರುವ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದರು.
ರೈತರು ನಮ್ಮ ರಾಷ್ಟ್ರದ ಬೆನ್ನೆಲು. ರಾಜ್ಯ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಪ್ರತಿ ವರ್ಷ 6,000 ರೂ.ಹಣಕಾಸಿನ ನೆರವಿನ ಜೊತೆಗೆ ರಾಜ್ಯ ಸರ್ಕಾರವು ಅರ್ಹ ಕೃಷಿಯಾಧಾರಿತ ಕುಟುಂಬಗಳಿಗೆ ಎರಡು ಕಂತುಗಳಲ್ಲಿ ಪ್ರತಿವರ್ಷ 4,000 ಹೆಚ್ಚುವರಿ ಹಣಕಾಸಿನ ನೆರವನ್ನು ಒದಗಿಸುತ್ತಿದೆ. ಇದರಿಂದ ಎಲ್ಲ ರೈತರು ಪ್ರತಿವರ್ಷ 10 ಸಾವಿರ ರೂ.ಗಳನ್ನು ತಮ್ಮ ಖಾತೆಗಳಿಗೆ ನೇರವಾಗಿ ಪಡೆಯಲಿದ್ದಾರೆ. 2019-20ರಲ್ಲಿ ಬೆಳೆ ಸಾಲ ಮನ್ನಾ ಯೋಜನೆ ಜಾರಿಗೆ ತರಲಾಗಿದೆ. ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷದವರೆಗೆ, ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದಿರುವ ರೈತರ ಪ್ರತಿ ಕುಟುಂಬಕ್ಕೆ 2 ಲಕ್ಷದವರೆಗೆ ಸಾಲ ಮನ್ನಾ ಮಾಡಲು ಯೋಜನೆ ಜಾರಿಗೆ ತರಲಾಗಿದೆ. 2020ರ ಮಾರ್ಚ್‌ಗೆ ಇದು ಮುಕ್ತಾಯವಾಗಲಿದೆ. 21 ಲಕ್ಷ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದರು.
ರಾಜ್ಯದಲ್ಲಿ ರಸ್ತೆ ಸಂಪರ್ಕಕ್ಕಾಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದಡಿ ಹತ್ತು ಸಾವಿರ ಕಿ.ಮೀ ಅಷ್ಟು ಹೆದ್ದಾರಿ ಸುಧಾರಣೆಗೆ ಅನುಮೋದನೆ, ಬೆಂಗಳೂರು ಟ್ರಾಫಿಕ್ ತಗ್ಗಿಸಲು ಬೆಂಗಳೂರು ಸುತ್ತ ಮುತ್ತ 156 ಕಿ.ಮೀ ನಷ್ಟು ಪರ್ಯಾಯ ರಸ್ತೆ ಅಗಲೀಕರಣ, ಸಬ್ ಅರ್ಬನ್ ರೈಲು ಜಾಲದ ಅನುಷ್ಠಾನಕ್ಕೆ 18,621 ಕೋಟಿ ಅಂದಾಜು ಮೊತ್ತ ಅನುಮೋದನೆ, ವಿದ್ಯುತ್ ಚಾಲಿತ ವಾಹನ ಬಳಕೆ ಉತ್ತೇಜನಕ್ಕೆ ಬೆಂಗಳೂರಲ್ಲಿ 92 ವಿದ್ಯುತ್ ಚಾರ್ಜಿಂಗ್ ಕೇಂದ್ರ ಆರಂಭಿಸಲಾಗುತ್ತದೆ ಎಂದರು.
ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ 25 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಭಾರತ ಸರ್ಕಾರ ಚಿಕ್ಕಮಗಳೂರು ಮತ್ತು ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯಿಂದ 600 ಹೆಚ್ಚುವರಿ ಸೀಟ್ ಲಭ್ಯ, ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿಗೆ 30,445 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರಾಜ್ಯದ ಯೋಜನೆಗಳನ್ನು ವಿವರಿಸಿದರು.