ಬೆಂಗಳೂರು: ಒಕ್ಕಲಿಗರು ಹೋರಾಟದ ಮೂಲಕ ರಾಜಕೀಯವಾಗಿ ತಮ್ಮ ಸ್ವಾಯತ್ತತೆ ಉಳಿಸಿಕೊಳ್ಳಬೇಕು. ಆದರೆ ನಿನ್ನೆ ನಡೆದ ಒಕ್ಕಲಿಗರ ಹೋರಾಟದಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ತಳಕು ಹಾಕಿದ್ದು ಮಾತ್ರ ಸರಿಯಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯವರು ಲಿಂಗಾಯತರನ್ನು ತಮ್ಮ ಪರವಾಗಿ ಮಾಡಿಕೊಂಡಿದ್ದಾರೆ. ಲಿಂಗಾಯಿತ ಮಠಾಧೀಶರೆಲ್ಲ ಯಡಿಯೂರಪ್ಪ ಪರವಾಗಿಯೇ ಇದ್ದಾರೆ. ಹಾಗಾಗಿ ಮೋದಿ ಸರ್ಕಾರ ಒಕ್ಕಲಿಗರನ್ನು ಹಣ್ಣು ಮಾಡಿ, ರಾಜ್ಯವನ್ನು ಒಡೆದು ತಮ್ಮ ಕೈ ವಶ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಒಕ್ಕಲಿಗರು ಇನ್ನೂ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿ, ರಾಜಕೀಯವಾಗಿ ತಮ್ಮ ಸ್ವಾಯತ್ತತೆ ಉಳಿಸಿಕೊಳ್ಳಬೇಕು. ಆದರೆ ಒಕ್ಕಲಿಗರ ಹೋರಾಟದಲ್ಲಿ ಡಿಕೆಶಿ ಹೆಸರನ್ನು ತಳಕು ಹಾಕಿದ್ದು ಮಾತ್ರ ಸರಿಯಲ್ಲ. ಅವರ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ. ನಾನು ಮತ್ತು ಹಿರೇಮಠರೇ ಹಲವಾರು ಆರೋಪಗಳನ್ನು ಮಾಡಿದ್ದೇವೆ ಎಂದು ಡಿಕೆಶಿ ಹೆಸರು ಬಳಸಿ ಹೋರಾಟ ನಡೆಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.