ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ಫೋಟೋ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಆದ್ರೆ, ಈ ಆದೇಶದಲ್ಲಿ ಕೆಲ ಕನ್ನಡ ಪದಗಳನ್ನು ತಪ್ಪಾಗಿ ಬಳಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆದೇಶ ಪತ್ರದಲ್ಲಿ ಪ್ರಸ್ತಾವನೆ ಎಂಬುದರ ನಡಾವಳಿ ಬದಲಿಗೆ 'ನಡವಳಿ', 'ಪ್ರಸತ್ತಾವನೆ', ಮೇಲೆ ಬದಲಿಗೆ 'ಮೇಲೇ', ಕರ್ನಾಟಕ ಪದ ಬಳಕೆ ಬದಲು 'ಕರ್ನಾಟಾ', ಆಡಳಿತ ಎನ್ನಲು 'ಆಡಳಿದ' ಅಲ್ಲದೆ, ಭಾಗ-1 ಎನ್ನುವುದನ್ನು 'ಬಾಗ-1' ಎಂದು ಬರೆದಿರುವುದು ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಭಾರತದ ಅಧಿಕಾರಿಗಳು, ಹಿಂದಿ ಭಾಷೆಯ ಪ್ರಭಾವದಿಂದ ಈ ರೀತಿ ತಪ್ಪುಗಳು ಆಗುತ್ತಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಟೀಕೆ ಬೆನ್ನಲ್ಲೇ ತಿದ್ದುಪಡಿ: ಆದೇಶ ಪ್ರತಿಯಲ್ಲಿನ ತಪ್ಪುಗಳಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರವು ಎಲ್ಲ ಶಬ್ದಗಳನ್ನು ಸರಿಪಡಿಸಿ ಹೊಸದಾಗಿ ಆದೇಶ ಪ್ರತಿ ಹೊರಡಿಸಿದೆ. ಎಡವಟ್ಟನ್ನು ಮನಗಂಡ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಇದೀಗ ತಪ್ಪುಗಳನ್ನು ಸರಿಪಡಿಸಿದೆ.
ಇದನ್ನೂ ಓದಿ: ವ್ಯಾಪಕ ಟೀಕೆಗೆ ಮಣಿದ ಸರ್ಕಾರ: ಒಂದೇ ದಿನದಲ್ಲಿ ಸರ್ಕಾರಿ ಕಚೇರಿಗಳ ಫೋಟೋ/ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ವಾಪಸ್