ಆನೇಕಲ್ : ತಾಲೂಕಿನ ಪ್ರತಿಷ್ಠಿತ ಖಾಸಗಿ ಸಹಭಾಗಿತ್ವದ ಸಿಎಸ್ಆರ್ ನಿಧಿಯನ್ನು ಆಮ್ಲಜನಕ ಉತ್ಪಾದನಾ ಘಟಕ ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಉಪಯೋಗಿಸುವ ಕುರಿತು ಕೂಡಲೇ ಮಾತುಕತೆ ನಡೆಸಲಾಗುವುದೆಂದು ಚಿತ್ರದುರ್ಗ ಸಂಸದ ಡಾ. ಎ. ನಾರಾಯಣಸ್ವಾಮಿ ಭರವಸೆ ನೀಡಿದರು.
ಇಂದು ದಿಢೀರನೇ ಆನೇಕಲ್ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ, ಮೂರ್ನಾಲ್ಕು ದಿನದಲ್ಲಿ ಹೃದಯ ತಜ್ಞ ದೇವಿಶೆಟ್ಟಿ, ಬಯೋಕಾನ್, ಜಿಗಣಿಯ ಸೆನ್ಸೆರಾ ಮುಂತಾದ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಈ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಆಸ್ಪತ್ರೆಗೆ ಭೇಟಿ ನಂತರ ತಹಶೀಲ್ದಾರ್ ಪಿ. ದಿನೇಶ್, ನೋಡಲ್ ಅಧಿಕಾರಿ ತಿಪ್ಪೇಸ್ವಾಮಿಯೊಂದಿಗೆ ಸಮಾಲೋಚಿಸಿ ನಂತರ ಮಾತನಾಡಿದ ಅವರು, ರೆಮ್ಡಿಸಿವರ್, ಕೋವ್ಯಾಕ್ಸಿನ್-ಕೋವಿಶೀಲ್ಡ್, ಆಮ್ಲಜನಕ, ವೆಂಟಿಲೇಟರ್ಯುಕ್ತ ಚಿಕಿತ್ಸಾ ಕೇಂದ್ರಗಳಿಲ್ಲದೆ ಹೆಚ್ಚು ಸಾವು ಸಂಭವಿಸುತ್ತಿವೆ.
ಕೊರೊನಾ ಎರಡನೇ ಅಲೆ ಅಬ್ಬರಿಸಿದ ದಿನದಿಂದ ಚಿತ್ರದುರ್ಗದಲ್ಲಿದ್ದೆ. ಸದ್ಯ ಹುಟ್ಟೂರು ಆನೇಕಲ್ಗೆ ಭೇಟಿ ನೀಡಿದ್ದೇನೆ. ಆದರೂ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ, ಖಾಸಗಿ ನರ್ಸಿಂಗ್ ಹೋಂ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳ ಸಂಪರ್ಕದಲ್ಲಿದ್ದು ಆಗಿಂದಾಗ್ಗೆ ಪರಿಸ್ಥಿತಿ ಕುರಿತು ಮಾಹಿತಿ ಪಡೆಯುತ್ತಿದ್ದೆ ಎಂದರು.
ಈಗಾಗಲೇ ಜಿಗಣಿಯ ಯೂನಿವರ್ಸಲ್, ನೆರಳೂರು ಮತ್ತು ಬೊಮ್ಮಂದ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳಿದ್ದರೂ ಆನೇಕಲ್ ಭಾಗಕ್ಕೆ ಆದ್ಯತೆ ಮೇರೆಗೆ ಸೇವೆ ದೊರಕಿಲ್ಲ.
ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ 43 ಹಾಸಿಗೆಗಳು ಕೋವಿಡ್ ಚಿಕಿತ್ಸೆಗಾಗಿ ಮೀಸಲಿದ್ದರೂ ಅಗತ್ಯಕ್ಕಿಂತ ಹೆಚ್ಚು ಸೋಂಕಿತರನ್ನು ದಾಖಲಿಸಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆ್ಯಂಬುಲೆನ್ಸ್ ನಿಲುಗಡೆ ಜಾಗದಲ್ಲೂ ಹಾಸಿಗೆ ವ್ಯವಸ್ಥೆ ಮಾಡಿ ಶಕ್ತಿ ಮೀರಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ರೆಮ್ಡಿಸಿವರ್ ಬದಲು ಸ್ಥೆರಾಯ್ಡ್ ಬಳಕೆ : ಸೋಂಕಿತರ ಉಸಿರಾಟದ ಪ್ರಮಾಣ ಶೇ.90ರಷ್ಟು ಪ್ರಮಾಣವಿದ್ದಾಗ ಸ್ವಲ್ಪ ಮಟ್ಟಿಗೆ ಸ್ಥೆರಾಯ್ಡ್ ಲಸಿಕೆ ಪ್ರಾಣ ಉಳಿಸಬಲ್ಲದು. ಆದ್ದರಿಂದ ಕೊರತೆಯಿರುವ ರೆಮ್ಡಿಸಿವರ್ ಅಲಭ್ಯತೆಗೆ ಇದೊಂದು ಸಲಹೆ ಎಂದು ತಿಳಿಸಿದರು.
ದೇವರು,ಸರ್ಕಾರ, ಮೋದಿಯನ್ನು ದೋಷಿಸದಿರಿ : ಇತ್ತೀಚೆಗೆ ಕೋವಿಡ್ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾವಿದೆ. ಈ ಕುರಿತು ಮೋದಿ ಮತ್ತು ಸರ್ಕಾರದ ಮೇಲೆ ಅಪಸ್ವರದ ಚರ್ಚೆ ನಡೆಯುತ್ತಿದೆ. ನರೇಂದ್ರ ಮೋದಿ ಕರೆಯಂತೆ ನಿರಂತರ ಮಾಸ್ಕ್, ಅಂತರ ಬಳಸಿ ಎಚ್ಚರದಿಂದ ಇರಿ. ದೂಷಿಸುವುದರಿಂದ ಆರೋಗ್ಯ ಸುಧಾರಿಸಿತ್ತಾ ಎಂದು ಪ್ರಶ್ನಿಸಿದರು.
ಮೋದಿ ಸವಲತ್ತು ನೀಡುವ ಭರವಸೆ : ರೆಮ್ಡಿಸಿವರ್, ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆಗಳು ಕೊರತೆಯಿದೆ. ಆದಷ್ಟು ಆಮದಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಲಾಕ್ಡೌನ್ ಬಾಧಿತರಿಗೆ ಸರ್ಕಾರ ಅಕ್ಕಿ ನೀಡುವ ಭರವಸೆ ನೀಡಿದೆ.
ಮುಂದೆ ಮೋದಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಲಾಕ್ಡೌನ್ ಹೇರಿಕೆ ಸಂದರ್ಭದ ಸೌಲತ್ತುಗಳ ಹಿನ್ನೆಲೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.