ದೇವನಹಳ್ಳಿ: ರಾಜ್ಯದ ರಾಜಧಾನಿಯಿಂದ 40 ಕಿ.ಮೀ ದೂರ ಹಾಗು ಜಿಲ್ಲಾಧಿಕಾರಿಗಳ ಕಚೇರಿಯಿಂದ 5 ಕಿ.ಮೀ ದೂರದಲ್ಲೇ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ. ಊರಿನ ಹೊರ ಭಾಗದಲ್ಲಿ ಗುಡಿಸಲುಗಳಲ್ಲಿ ವಾಸವಾಗಿರುವ ಕುಟುಂಬಗಳು ಈ ಆಚರಣೆಯಿಂದ ನರಳುತ್ತಿವೆ.
ದೇಶದ ಸಂವಿಧಾನದ ಜಾತಿ, ಧರ್ಮ, ಲಿಂಗ ಮತ್ತು ಬಣ್ಣಗಳ ಆಧಾರದ ಮೇಲೆ ಯಾರನ್ನೂ ತಾರತಮ್ಯ ಮಾಡುವಂತಿಲ್ಲ ಎಂದಿದೆ. ಸಂವಿಧಾನದ ಕಲಂ 17ರ ಪ್ರಕಾರ, ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಲಾಗಿದೆ. ಆದರೂ ಸಹ ಭಾರತದಲ್ಲಿ ಅಲ್ಲಲ್ಲಿ ಅನಿಷ್ಠ ಪದ್ಧತಿ ಆಚರಣೆಯಲ್ಲಿರುವುದು ದುರಾದೃಷ್ಟಕರ.
ದೇವನಹಳ್ಳಿ ತಾಲೂಕಿನ ಬನ್ನಿಮಂಗಲ ಗ್ರಾಮದ ಹೊರ ಭಾಗದ ಗುಂಡು ತೋಪಿನಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಕ್ಕೆ ಸೇರಿದ 5 ಕುಟುಂಬಗಳು ವಾಸವಾಗಿವೆ. ಇವರು ಗ್ರಾಮದಲ್ಲಿ ಓಡಾಡುವಂತಿಲ್ಲ, ಅಲ್ಲಿನ ಮಕ್ಕಳ ಜೊತೆ ಆಟ ವಾಡುವಂತಿಲ್ಲ. ಒಂದು ವೇಳೆ ಊರಿನೊಳಕ್ಕೆ ಹೋದರೆ ಬೈದು, ಪ್ರಶ್ನಿಸಿ ಹಲ್ಲೆ ಮಾಡಲು ಬರುತ್ತಾರೆ. ಇದರಿಂದ ಊರಿನೊಳಗೆ ಹೋಗುವ ಧೈರ್ಯ ಮಾಡುತ್ತಿಲ್ಲ ಎಂದು ಹೇಳುತ್ತಾರೆ.
ಅಲೆಮಾರಿ ಕುಟುಂಬವನ್ನು ಗ್ರಾಮದಿಂದ ಹೊರಗೆ ಹಾಕಿದ ಗ್ರಾಮಸ್ಥರು!
ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಕ್ಕೆ ಸೇರಿದ ಇವರು ಸುಮಾರು 20 ವರ್ಷಗಳ ಹಿಂದೆ ಬನ್ನಿಮಂಗಲ ಗ್ರಾಮದ ಮಧ್ಯ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಗ್ರಾಮಸ್ಥರು ಇವರನ್ನು ಹೊರ ಹಾಕುವ ಯತ್ನ ನಡೆಸಿದ್ದರು. ಈ ಸಮಯದಲ್ಲಿ ಗ್ರಾಮದ ಕೆಲವರು ಗ್ರಾಮದ ಹೊರಭಾಗದಲ್ಲಿರುವ ಗುಂಡುತೋಪಿನಲ್ಲಿ ವಾಸಿಸಲು ಅನುಮತಿ ನೀಡಿದ್ದರಂತೆ. 8 ಗುಂಟೆ ವಿಸ್ತೀರ್ಣದ ಗುಂಡುತೋಪಿನಲ್ಲಿ ಐದು ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸವಾಗಿದ್ದು, ಕೂಲಿ ಕೆಲಸ ಮಾಡಿ ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದಾರೆ.
ಗುಡಿಸಲುಗಳಲ್ಲಿ ಅಲೆಮಾರಿಗಳ ವಾಸ
ಹರಿದ ಪ್ಲಾಸ್ಟಿಕ್ ಚೀಲ, ಬ್ಯಾನರ್, ತೆಂಗಿನ ಗರಿಗಳಿಂದ ಗುಡಿಸಲು ಕಟ್ಟಿಕೊಂಡು ಅಲೆಮಾರಿ ಕುಟುಂಬಗಳು ವಾಸವಾಗಿವೆ. ನೋಡಲು ಸಣ್ಣ ಗೂಡುಗಳಂತಿರುವ ಗುಡಿಸಲಲ್ಲಿ ಮಕ್ಕಳು, ಹೆಂಗಸರು, ವೃದ್ಧರು ನೆಲೆಸಿದ್ದಾರೆ. ಮಳೆ ಬಂದ್ರೆ ನರಕ ದರ್ಶನವಾಗುತ್ತೆ. ಕೊರೆಯುವ ಚಳಿ, ಕೆಸರಿನ ಗುಂಡಿಗಳು, ಸೊರುವ ಗುಡಿಸಲು ಈ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ವೃದ್ಧರು ವಾಸಿಸುತ್ತಿದ್ದಾರೆ.
7 ದಿನದ ಮಗು ಸಾವು
ಹೊರಗೆ ಹಾವುಗಳ ಕಾಟ ಇದ್ದು ಭಯದಲ್ಲಿಯೇ ದಿನನಿತ್ಯ ಜೀವನ ನಡೆಸುತ್ತಿದ್ದಾರೆ. ಈ ನರಕದಲ್ಲಿ 7 ದಿನದ ಮಗು ಅನಾರೋಗ್ಯದಿಂದ ಸಾವನ್ನಪ್ಪಿದೆ. ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ರಾತ್ರಿಯ ಸಮಯದಲ್ಲಿ ಮಕ್ಕಳ ಓದಿಗೆ ತೊಂದರೆಯಾಗುತ್ತಿದೆ.
ಗುಂಡುತೋಪಿನಿಂದಲೂ ಅಲೆಮಾರಿಗಳ ಎತ್ತಂಗಡಿ ಮಾಡಿಸಲು ಅಧಿಕಾರಿಗಳ ಒತ್ತಡ
ಅಧಿಕಾರಿಗಳು, ಆರ್ಐ ಮತ್ತು ವಿಲೇಜ್ ಅಕೌಂಟೆಂಟ್ ಬಂದು ಜಾಗ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಅಲೆಮಾರಿಗಳು ಆರೋಪ ಮಾಡಿದ್ದಾರೆ.
ಆಧಾರ್, ಪಡಿತರ ಇದ್ದರೂ ಸರ್ಕಾರದ ಸೌಲಭ್ಯ ವಿಲ್ಲ
ಅಲೆಮಾರಿಗಳ ಬಳಿ ಆಧಾರ್ ಕಾರ್ಡ್, ಮತದಾನದ ಪಟ್ಟಿಯಲ್ಲಿ ಹೆಸರು, ಪಡಿತರ ಚೀಟಿ ಎಲ್ಲವೂ ಇವೆ. ಆದರೆ ಇವರ ಹೆಸರಲ್ಲಿ ಸ್ವಂತ ನಿವೇಶನ ಇಲ್ಲ. ಸುಮಾರು 20 ವರ್ಷಗಳಿಂದ ನಿವೇಶನಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದರೂ ನಿವೇಶನದ ಕನಸು ಕನಸಾಗಿಯೇ ಉಳಿದಿದೆ.
ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳ ನಿವೇಶನ ಕೊಡುವ ಅಶ್ವಾಸನೆ ಕೊಟ್ಟು ಮರೆಯಾಗುತ್ತಾರೆ. ಸ್ಥಳೀಯರ ಪ್ರಕಾರ, ಗ್ರಾಮದ ಸರ್ವೆ ನಂಬರ್ 30 ರಲ್ಲಿ 18 ಗುಂಟೆ ಸರ್ಕಾರಿ ಗೋಮಾಳ ಇದ್ದು ಈ ಜಾಗದಲ್ಲಿ ನಿವೇಶನ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅಲೆಮಾರಿಗಳ ಮನವಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.