ಬೆಂಗಳೂರು: ಅವಿವಾಹಿತ ಮಹಿಳೆಯನ್ನು ಮೂವರು ಪರಿಚಯಸ್ಥರೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲೇಶ್ವರಂ ನಿವಾಸಿ ಸುನೀತಾ ರಾಮಪ್ರಸಾದ್ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಗೋವಿಂದಪುರ ನಿವಾಸಿಗಳಾದ ಇಮ್ರಾನ್ ಮತ್ತು ವೆಂಕಟೇಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ಕಿರಣ್ ಎಂಬಾತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
![Woman murder in Bengaluru, unmarried woman murder in Bengaluru, Relative killed to woman in Bengaluru, Bengaluru crime news, ಬೆಂಗಳೂರಿನಲ್ಲಿ ಮಹಿಳೆ ಕೊಲೆ, ಬೆಂಗಳೂರಿನಲ್ಲಿ ಅವಿವಾಹಿತ ಮಹಿಳೆ ಕೊಲೆ, ಬೆಂಗಳೂರಿನಲ್ಲಿ ಸಂಬಂಧಿಯಿಂದ ಮಹಿಳೆಯ ಹತ್ಯೆ, ಬೆಂಗಳೂರು ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-bng-06-varthoor-murder-case-7202806_12042022225412_1204f_1649784252_956.jpg)
ಏನಿದು ಘಟನೆ: ಆರೋಪಿಗಳ ಪೈಕಿ ಕಿರಣ್ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಈತನ ಪತ್ನಿ ಶಿಕ್ಷಕಿಯಾಗಿದ್ದಾರೆ. ವರ್ತೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಒಂದನೇ ಮಹಡಿಯಲ್ಲಿ ದಂಪತಿ ವಾಸವಾಗಿದ್ದಾರೆ. ಇಮ್ರಾನ್ ಆಟೋ ಚಾಲಕನಾಗಿದ್ದು, ವೆಂಕಟೇಶ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದನು. ಈ ಹಿಂದೆ ಕಿರಣ್ ಕೂಡ ಗೋವಿಂದಪುರದಲ್ಲಿ ವಾಸವಾಗಿದ್ದರಿಂದ ಮೂವರು ಪರಿಚಯಸ್ಥರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳೊಂದಿಗೆ ಮಹಿಳೆ ಪರಿಚಯ: ಸುನೀತಾ ರಾಮ್‌ಪ್ರಸಾದ್ ಅವಿವಾಹಿತರಾಗಿದ್ದು, ಅವರ ಸಹೋದರರು ವಿದೇಶದಲ್ಲಿದ್ದಾರೆ. ಇನ್ನು ಅವರ ತಂದೆ ಮೈಸೂರಿನಲ್ಲಿದ್ದಾರೆ. ಹೀಗಾಗಿ ಮಲ್ಲೇಶ್ವರಂನಲ್ಲಿ ಸಂಬಂಧಿಯೊಬ್ಬರ ಜತೆ ಸುನೀತಾ ವಾಸವಾಗಿದ್ದರು. ಸಣ್ಣಪುಟ್ಟ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸುನೀತಾ ತಮ್ಮ ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಕಿರಣ್ ಪರಿಚಯವಾಗಿದೆ. ಅಲ್ಲದೆ ಸುನೀತಾಗೆ ನಡೆಯಲು ಕಷ್ಟವಾಗುತ್ತಿದ್ದರಿಂದ ಎಲ್ಲಿಗಾದರೂ ಹೋಗಬೇಕಾದರೆ ಕಿರಣ್, ಇಮ್ರಾನ್ ಹಾಗೂ ವೆಂಕಟೇಶ್ ಸಹಾಯ ಪಡೆದುಕೊಳ್ಳುತ್ತಿದ್ದರು.
ಓದಿ: ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನ ಬರ್ಬರವಾಗಿ ಕೊಲೆಗೈದ ಗಂಡ!
ಕೊಲೆಗೆ ಸಂಚು: ಸುನೀತಾ ಬಳಿ ಹೆಚ್ಚು ಹಣವಿರಬಹುದು ಎಂದು ಭಾವಿಸಿದ್ದ ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದಾರೆ. ಈ ಹಿನ್ನೆಲೆ ಕಿರಣ್ ತಾನು ವಾಸವಾಗಿರುವ ಅಪಾರ್ಟ್‌ಮೆಂಟ್ ಮಾಲೀಕರಿಗೆ ನಾಲ್ಕನೇ ಮಹಡಿಯಲ್ಲಿ ಖಾಲಿ ಇರುವ ಮನೆಗೆ ತಮ್ಮ ಪರಿಚಯಸ್ಥರೊಬ್ಬರು ಬಾಡಿಗೆಗೆ ಬರುತ್ತಾರೆ ಎಂದು ನಾಲ್ಕು ದಿನಗಳ ಹಿಂದೆಯೇ ಕೀ ಪಡೆದುಕೊಂಡಿದ್ದ. ಏ.1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನೀತಾರನ್ನು ಮೂವರು ಆರೋಪಿಗಳು ನಾಲ್ಕನೇ ಮಹಡಿಯ ಮನೆಗೆ ಕರೆದೊಯ್ದಿದ್ದಾರೆ.
![Woman murder in Bengaluru, unmarried woman murder in Bengaluru, Relative killed to woman in Bengaluru, Bengaluru crime news, ಬೆಂಗಳೂರಿನಲ್ಲಿ ಮಹಿಳೆ ಕೊಲೆ, ಬೆಂಗಳೂರಿನಲ್ಲಿ ಅವಿವಾಹಿತ ಮಹಿಳೆ ಕೊಲೆ, ಬೆಂಗಳೂರಿನಲ್ಲಿ ಸಂಬಂಧಿಯಿಂದ ಮಹಿಳೆಯ ಹತ್ಯೆ, ಬೆಂಗಳೂರು ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-bng-06-varthoor-murder-case-7202806_12042022225412_1204f_1649784252_127.jpg)
ನಾಲ್ವರ ಮಧ್ಯೆ ಜಗಳ ಶುರು: ತಡರಾತ್ರಿ 1.30ರ ಸುಮಾರಿಗೆ ಮನೆಯಿಂದ ಮೂವರು ಹೊರಗಡೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಲ್ವರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ಆಗಿರುವ ಸಾಧ್ಯತೆಯಿದೆ. ಅದು ವಿಕೋಪಕ್ಕೆ ಹೋದಾಗ ಮಹಿಳೆಯ ಬಾಯಿ ಮತ್ತು ಮೂಗಿಗೆ ಬಟ್ಟೆ ತುರುಕಿ, ಉಸಿರುಗಟ್ಟಿಸಿ ಕೊಲೆ ಮಾಡಿ ಮೂವರು ನಾಪತ್ತೆಯಾಗಿದ್ದರು.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಏ.5ರಂದು ಅಕ್ಕ-ಪಕ್ಕದ ನಿವಾಸಿಗಳಿಗೆ ಕೊಳೆತ ವಾಸನೆ ಬರುತ್ತಿದ್ದ ಕಾರಣ ಅಪಾರ್ಟ್‌ಮೆಂಟ್ ಮಾಲೀಕರಿಗೆ ದೂರು ನೀಡಿದ್ದರು. ಮನೆ ಕೀ ಕಿರಣ್ ಬಳಿ ಇದ್ದುದರಿಂದ ಆತನ ಮನೆಗೆ ಬಂದಾಗ ಆರೋಪಿ ಇರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವರ್ತೂರು ಠಾಣೆ ಪೊಲೀಸರು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸುನೀತಾ ಶವ ಪತ್ತೆಯಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ಹಾಗೂ ಸ್ಥಳದಲ್ಲಿದ್ದ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಮೂಲಕ ಸುನೀತಾ ಎಂಬುದು ಖಾತ್ರಿಯಾಗಿದೆ.
ಓದಿ: ಲವ್ ಮ್ಯಾರೇಜ್.. ಪ್ರೀತಿಯ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ!
ಪ್ರಕರಣ ದಾಖಲು: ಸುನೀತಾ ಸಂಬಂಧಿಕರಿಗೆ ಪೊಲೀಸರು ಮಾಹಿತಿ ಮುಟ್ಟಿಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ಸುನೀತಾರ ಮೊಬೈಲ್ ನೆಟ್‌ವರ್ಕ್ ಮತ್ತು ಮೊಬೈಲ್ ಸಿಡಿಆರ್ ಹಾಗೂ ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮರಾ ಆಧರಿಸಿ ವೆಂಕಟೇಶ್ ಮತ್ತು ಇಮ್ರಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಿರಣ್ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಮೊದಲು ನಾಪತ್ತೆ ಪ್ರಕರಣ ದಾಖಲು: ಮಾ.31ರಂದು ಸಂಜೆ ವ್ಯವಹಾರ ಸಂಬಂಧ ಮೀಟಿಂಗ್ ಇದೆ ಎಂದು ಮನೆಯಿಂದ ಹೋದ ಸುನೀತಾ ಏ.1ರ ರಾತ್ರಿ 10 ಗಂಟೆಯಾದರು ಮನೆಗೆ ಬಂದಿರಲಿಲ್ಲ. ಹೀಗಾಗಿ ಇಡೀ ಕುಟುಂಬ ಸಂಬಂಧಿಕರು ಮತ್ತು ಸ್ನೇಹಿತರು ಸೇರಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸಿಕ್ಕಿರಲಿಲ್ಲ. ಈ ಸಂಬಂಧ ಏ.4ರಂದು ಅವರ ಚಿಕ್ಕಪ್ಪ ಬಿ.ಎನ್. ಬಾಲಾಜಿ ಎಂಬುವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಾಣಿಯಾದ ಬಗ್ಗೆ ದೂರು ನೀಡಿದ್ದರು. ಏಪ್ರಿಲ್ 5ಕ್ಕೆ ಸುನೀತಾಳ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ತಿಳಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.