ಬೆಂಗಳೂರು: ಪವಿತ್ರ ಆರ್ಥಿಕತೆಗಾಗಿ ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಪ್ರಸನ್ನ ಅವರಿಂದ ಮನವಿ ಸ್ವೀಕರಿಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸಿದ್ರು.
ಈ ವೇಳೆ ಮಾತನಾಡಿದ ಸದಾನಂದಗೌಡ, ಗ್ರಾಮೀಣ ಜನರಿಗೆ ಹೆಚ್ಚು ಉದ್ಯೋಗ ನೀಡಬೇಕು. ತೆರಿಗೆ, ಜಿಎಸ್ಟಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಸ್ವದೇಶಿ ಬೇಡಿಕೆಗಳನ್ನೇ ಕೇಂದ್ರ ಸರ್ಕಾರವೂ ಪಾಲಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಸಚಿವರ ಜೊತೆ ಸಭೆ ನಡೆಸಲು ವೇದಿಕೆ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪ್ರಸನ್ನ ಮಾತನಾಡಿ, ಕೇಂದ್ರ ಸಚಿವರು ಒಂದು ತಿಂಗಳ ಒಳಗಾಗಿ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ವಿಚಾರವನ್ನು ನಾಳೆ ಬೆಳಿಗ್ಗೆ ನಡೆಯುವ ಗ್ರಾಮ ಸೇವಾ ಸಂಘದ ಸದಸ್ಯರೊಂದಿಗೆ ಒಪ್ಪಿಗೆ ಪಡೆದು ನಾಳೆ ಸಂಜೆ ಜಯಪ್ರಕಾಶ ನಾರಾಯಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ ಎಂದರು.
ಉಪವಾಸ ಸತ್ಯಾಗ್ರಹ ಕೈಬಿಟ್ಟರೂ, ಸತ್ಯಾಗ್ರಹ ನಿಲ್ಲುವುದಿಲ್ಲ. ಕರ್ನಾಟಕದಾದ್ಯಂತ ಹೋಗಿ ಪ್ರತೀ ಮನೆಗೂ ಇದರ ಅರಿವು ಮೂಡಿಸಲಾಗುವುದು ಎಂದರು.