ಬೆಂಗಳೂರು: ಸಾವರ್ಕರ್ ಹೆಸರು ಪದೇ ಪದೇ ಪ್ರಸ್ತಾಪಿಸುವ ಹಿಂದೆ ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣ ಇದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪ ಮಾಡಿದ್ದಾರೆ. ಹೆಬ್ಬಾಳ ಮೇಲು ರಸ್ತೆಗೆ ಸಾವರ್ಕರ್ ಹೆಸರು ಇಡುವ ವಿಚಾರವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಇದೇ ವಿಚಾರವಾಗಿ ಉಗ್ರಪ್ಪ ಅಸಮಾಧಾನ ಹೊರಹಾಕಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನಗತ್ಯವಾಗಿ ಈ ವಿಚಾರ ಪ್ರಸ್ತಾಪಿಸಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿವೆ. ಇದನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಕಾಳಜಿ ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಇಲ್ಲ. ಜನರ ಭಾವನೆಯನ್ನು ಕೆದಕಿ ವಿಷಯಾಂತರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇಂದು ದೇಶ ಹಾಗೂ ರಾಜ್ಯದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಜನರ ಸಮಸ್ಯೆಯನ್ನು ಪರಿಹಾರ ಮಾಡುವ ವಿಚಾರಕ್ಕೆ ಆದ್ಯತೆ ಸಿಗಬೇಕು.
ದೇಶದಲ್ಲಿ ಕೊರೊನಾದಿಂದ ಆರ್ಥಿಕ ದಿವಾಳಿತನ ಉಂಟಾಗುತ್ತಿದೆ, ಮತ್ತೊಂದೆಡೆ ನಮ್ಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಮೇಲೆ ಮಿಡತೆಗಳ ದಾಳಿ ನಡೆಯುತ್ತಿದೆ. ಇದರ ಬಗ್ಗೆ ರಾಜ್ಯ ಅಥವಾ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಮುಂದೆ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಈ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ವೀರ ಸಾವರ್ಕರ್ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪ್ರಮುಖ ಸ್ಥಳಗಳಿಗೆ ಖ್ಯಾತನಾಮರ ಹೆಸರು ಇಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಇಂತಹ ಪರಿಸ್ಥಿತಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.