ಬೆಂಗಳೂರು : ಎನ್‌ಡಿಎ 2.O ಸರ್ಕಾರದ ಎರಡನೇ ವರ್ಷದ ಸಂಭ್ರಮದಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು, ರಾಜ್ಯಾದ್ಯಂತ ರಕ್ತದಾನ ಮಾಡುವ ಮೂಲಕ ಕೋವಿಡ್ ಸಂದರ್ಭದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಓದಿ: ನಮ್ದು ಲೇಡಿಸ್ ಪಂಚಾಯ್ತಿ ಆಗೋಗಿದೆ ಸಾರ್.. ಜೆಂಟ್ಸ್ ಸಿಬ್ಬಂದಿ ಹಾಕಿ..
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಮೇ 30 ರಂದು ಏಳು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಲಿದೆ. ಈ ಸಂದರ್ಭದಲ್ಲಿ “ಸೇವಾ ಹೀ ಸಂಘಟನ್” ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೂಚಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇವಾ ಕಾರ್ಯಗಳ ಮೂಲಕ ತೊಂದರೆಗೆ ಸಿಲುಕಿದವರಿಗೆ ಸ್ಪಂದಿಸಲು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 29ರಂದು ಶನಿವಾರ ಪಕ್ಷದ ಕಾರ್ಯಕರ್ತರು ತಮ್ಮ ಹತ್ತಿರದ ಬ್ಲಡ್ ಬ್ಯಾಂಕ್‍ಗಳಿಗೆ ತೆರಳಿ ರಕ್ತದಾನ ಮಾಡುವಂತೆ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿಕದ ಸಮಸ್ಯೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾಕಷ್ಟು ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಸಂಗ್ರಹ ಇಲ್ಲದಿರುವ ಕಾರಣಕ್ಕೆ ಈ ಕೋವಿಡ್ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಅವಶ್ಯಕವಾದ ರಕ್ತ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಾವು-ನೋವು ಸಂಭವಿಸುತ್ತಿವೆ. ಹೀಗಾಗಿ, ನಾವು ರಕ್ತದಾನಕ್ಕೆ ಕರೆ ನೀಡುತ್ತಿದ್ದೇವೆ ಎಂದಿದ್ದಾರೆ.
ಮೇ 29 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಹಾಗೂ ಮೂಡಲಗಿ ತಾಲೂಕಿನ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಗೋಕಾಕ್ ನಗರದ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್‍ನಲ್ಲಿ ಮಧ್ಯಾಹ್ನ 12 ಗಂಟೆಗೆ ರಕ್ತದಾನ ಮಾಡಲಿದ್ದು, ನಾನೂ ಇದರಲ್ಲಿ ಭಾಗವಹಿಸುವುದಾಗಿ ಈರಣ್ಣ ಕಡಾಡಿ ತಿಳಿಸಿದ್ದಾರೆ.
ರೈತರಿಗೆ ಸಹಾಯವಾಣಿ : ಕಳೆದ ಒಂದು ವಾರದಿಂದ ರಾಜ್ಯದ ರೈತರಿಗೆ ದಿನನಿತ್ಯದ ವ್ಯವಹಾರಗಳಿಗೆ ತೊಂದರೆಯಾಗಿರುವುದರಿಂದ ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ 30 ಜಿಲ್ಲಾ ಕೇಂದ್ರಗಳಲ್ಲಿ ರೈತ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಹಣ್ಣು, ತರಕಾರಿ, ಆಹಾರ ಧಾನ್ಯ ಸೇರಿದಂತೆ ರೈತರು ಬೆಳೆದ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡಲು ತೊಂದರೆ ಇದ್ದರೆ, ಅಂಥವರಿಗೆ ಖರೀದಿದಾರರನ್ನು ಸಂಪರ್ಕಿಸಿ ನೆರವಾಗುವ ಕೆಲಸವನ್ನು ಸಹಾಯವಾಣಿ ಕೇಂದ್ರವು ಮಾಡುತ್ತಿದೆ ಎಂದು ತಿಳಿಸಿದ್ದಾರೆ.