ಬೆಂಗಳೂರು: ಪ್ಯಾರಾಚೂಟ್ ಆಯಿಲ್ ಬಾಟಲ್ಗಳನ್ನ ಖರೀದಿಸಿ ಅದರಲ್ಲಿ ಡ್ರಗ್ಸ್ ತುಂಬಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಂಟೋ ಥಾಮಸ್, ತಾಜುದ್ದೀನ್ ತಲಾಖ್ ಬಂಧಿತ ಆರೋಪಿಗಳು. ಇವರು ರಾಮಮುರ್ತಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು, ನಿಷೇಧಿತ ಗಾಂಜಾ ಮತ್ತು ಡ್ರಗ್ ಅನ್ನು ಮನೆಯಲ್ಲಿಯೇ ಇಟ್ಟುಕೊಂಡು ಮೂರು ಸಾವಿರ, ನಾಲ್ಕು ಸಾವಿರಕ್ಕೆ ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ರು. ಈ ಕುರಿತು ಮಾಹಿತಿ ತಿಳಿದು ಬಂದ ಹಿನ್ನೆಲೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ದಾಳಿ ನಡೆಸಿ ಆರೋಪಿಗಳ ಬಂಧಿಸಿದೆ.
ಆರೋಪಿಗಳು ಪ್ರಾಥಮಿಕ ತನಿಖೆ ವೇಳೆ ಸತ್ಯಾಂಶ ತಿಳಿಸಿದ್ದು, ತಮ್ಮ ಸಹಚರರಾದ ಆಂಧ್ರಪ್ರದೇಶದ ವೈಜಾಕ್ ಮೂಲದ ಸೆಂಥಿಲ್ ಎಂಬಾತನ ಜೊತೆ ಸಂಪರ್ಕ ಇಟ್ಟುಕೊಂಡು ಕಡಿಮೆ ಬೆಲೆಗೆ ಗಾಂಜಾವನ್ನು ಹಾಗೂ ಹ್ಯಾಶಿಶ್ ಆಯಿಲ್ ಖರೀದಿ ಮಾಡಿ, ಪೊಲೀಸರ ದಿಕ್ಕು ತಪ್ಪಿಸಲು ಪ್ಯಾರಾಚೂಟ್ ಆಯಿಲ್ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.
ಈ ಕುರಿತು ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಇತರರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಜೊತೆಗೆ ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ 4,500 ಗ್ರಾಂ. ಹ್ಯಾಶಿಸ್ ಆಯಿಲ್, 22.ಕೆ.ಜಿ ಗಾಂಜಾ, 620 ಖಾಲಿ ಡಬ್ಬ, ಮೊಬೈಲ್ ಫೋನ್, ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.