ಬೆಂಗಳೂರು: ಡ್ರಗ್ ಪೆಡ್ಲರ್ಸ್ಗಳಾದ ಕೇರಳ ಮೂಲದ ಶಾಮೀರ್ ಮತ್ತು ಸಾಹಿರ್ ಎಂಬಿಬ್ಬರನ್ನು ಬಂಧಿಸುವಲ್ಲಿ ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಶಾಮೀರ್ ಮೂಲತಃ ಕೇರಳದವನು. 2019ರಲ್ಲಿಯೇ ಕೊಚ್ಚಿಯ ಇನ್ಫೋಪಾರ್ಕ್ ಪೊಲೀಸರು ಡ್ರಗ್ಸ್ ಕೇಸ್ನಲ್ಲಿ ಬಂಧಿಸಿ ಒಂದು ವರ್ಷ ಜೈಲಿನಲ್ಲಿಟ್ಟಿದ್ದರು. ಬಳಿಕ ಹೊರ ಬಂದ ಈತ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಇಷ್ಟಾದ್ರೂ ಅಕ್ರಮ ಕಸುಬು ಬಿಡದೇ ಮತ್ತದೇ ದಂಧೆಯಲ್ಲಿ ತೊಡಗಿದ್ದು ಇದೀಗ ಸಿಸಿಬಿಗೆ ಸಿಕ್ಕಿಬಿದ್ದಿದ್ದಾನೆ.
ಮೂರು ತಿಂಗಳ ಹಿಂದೆ ಬೆಂಗಳೂರಿನ ಹೆಚ್ಎಎಲ್ನ ಅನ್ನಸಂದ್ರಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ಶಾಮೀರ್ ನಾಯಿ ಸಾಕಿಕೊಂಡಿದ್ದ. ಜೊತೆಗೆ, ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ತರಿಸಿಕೊಳ್ತಿದ್ದನಂತೆ. ಅದೇ ಡ್ರಗ್ಸ್ ಅನ್ನು ಸ್ನೇಹಿತ ಸಾಹಿರ್ ಮೂಲಕ ಕೇರಳಗೆ ಕಳುಹಿಸಿ ಮಾರಾಟ ಮಾಡುತ್ತಿದ್ದ. ಒಂದು ಎಂಡಿಎಂಎ ಟ್ಯಾಬ್ಲೆಟ್ ಅನ್ನು ಒಂದೂವರೆ ಸಾವಿರ ರೂ.ಗೆ ಖರೀದಿಸಿ ಕೇರಳದಲ್ಲಿ 4 ಸಾವಿರ ರೂ.ಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ. ಶಾಮೀರ್ ಮತ್ತು ಸಾಹಿರ್ ಇಬ್ಬರನ್ನು ಬೆಂಗಳೂರಿನ ಅವರ ಮನೆಯಲ್ಲಿಯೇ ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಜೊತೆಗೆ 3 ಲಕ್ಷ ರೂ. ಮೌಲ್ಯದ 52 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ ವಶಪಡಿಸಿಕೊಂಡಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಹಲವು ಸಂಗತಿಗಳನ್ನು ಶಾಮೀರ್ ಹೇಳಿಕೊಂಡಿದ್ದಾನೆ. ಅದರಲ್ಲಿ ಆತನ ಹಳೆಯ ಪ್ರೇಮ ಕಥೆ ಕೂಡ ಸೇರಿದೆ. ಕೇರಳದಲ್ಲಿದ್ದ ಶಾಮೀರ್ಗೆ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಆದ್ರೆ ಅದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಹಾಗಾಗಿ ಈತ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದಿದ್ದು ಯುವತಿಯ ಕುಟುಂಬಕ್ಕೆ ಗೊತ್ತಿದ್ದರಿಂದ ಪೊಲೀಸರಿಗೆ ಹೇಳಿ ಆತನನ್ನು ಅರೆಸ್ಟ್ ಮಾಡಿಸಿದ್ದರು. ಈ ಪ್ರಕರಣದಲ್ಲಿ ಆತನಿಗೆ ಜಾಮೀನು ಸಿಗದಂತೆ ನೋಡಿಕೊಂಡಿದ್ದರು. ಹೀಗೆ ಒಂದು ವರ್ಷಗಳ ಕಾಲ ಡ್ರಗ್ಸ್ ಕೇಸ್ನಲ್ಲಿ ಜೈಲಿನಲ್ಲಿ ಕಾಲ ಕಳೆದಿದ್ದಾನೆ. ಅಲ್ಲದೇ ಹೊರಬರುವವರೆಗೆ ವಕೀಲರ ಶುಲ್ಕವೆಂದು 8 ರಿಂದ 10 ಲಕ್ಷ ರೂ. ಖರ್ಚಾಗಿತ್ತು.
ಇದನ್ನೂ ಓದಿ: ಮದ್ಯ ಸೇವನೆಗೆ ಹಣ ಹೊಂದಿಸಲು ಕಳ್ಳತನ, ಕುಡುಕನ ಬಂಧನ
ಜೈಲಿನಿಂದ ಹೊರಬಂದ ಮೇಲೆ ಈತನಿಗೆ ಮಾಡಲು ಬೇರೆ ಕೆಲಸ ಕೂಡ ಸಿಕ್ಕಿರಲಿಲ್ಲ. ಕೊರೊನಾ ಹೊಡೆತ ಬೇರೆ ಇತ್ತು. ಹಾಗಾಗಿ ಬೆಂಗಳೂರಿಗೆ ಬಂದು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದೆ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.