ಬೆಂಗಳೂರು: ಒಮಿಕ್ರಾನ್ ರೂಪಾಂತರಿ ಕೋವಿಡ್ ತಳಿಯ ಭೀತಿ ಹಿನ್ನೆಲೆ, ರಾಜ್ಯಾದ್ಯಂತ ಇಂದಿನಿಂದಲೇ ಕೆಲ ಕಠಿಣ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಸಿನಿಮಾ ಥಿಯೇಟರ್, ಮಾಲ್, ಪಾರ್ಕ್, ಶಾಲೆಗಳಿಗೆ ಹಾಜರಾಗುವ ಮಕ್ಕಳ ಪೋಷಕರಿಗೆ 2 ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಜತೆಗೆ ಇಂದಿನಿಂದಲೇ ಮಾಲ್ಗಳಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಪಡೆದ ಪ್ರಮಾಣಪತ್ರ ತೋರಿಸಿದರೆ ಮಾತ್ರ ಮಾಲ್ ಒಳಗೆ ಪ್ರವೇಶಕ್ಕೆ ಅನುಮತಿಸಲಾಗುತ್ತಿದೆ.
ಹೆಚ್ಚಿನ ಸಿಬ್ಬಂದಿ ನಿಯೋಜನೆ:
ಜನರು ಸರತಿ ಸಾಲಲ್ಲಿ ನಿಂತು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಹಾಕಿಕೊಳ್ಳುವ ಜತೆಗೆ 2 ಡೋಸ್ ವ್ಯಾಕ್ಸಿನ್ ಪ್ರಮಾಣಪತ್ರ ತೋರಿಸುತ್ತಿದ್ದಾರೆ. ಮಂತ್ರಿ ಮಾಲ್, ಲುಲು ಮಾಲ್ ಸೇರಿದಂತೆ ಹಲವೆಡೆ ಮಾಲ್ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ತಪಾಸಣೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಲ್ಲದೇ ತಪಾಸಣೆ ಮಾಡದೆ ಒಳಗೆ ಬಿಟ್ಟರೆ ಮಾಲ್ಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆದೇಶ ಇರುವ ಹಿನ್ನೆಲೆ ಸಾರ್ವಜನಿಕ ಹಿತಾಸಕ್ತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಲುಲು ಮಾಲ್ನಲ್ಲಿ ಲಸಿಕಾ ಕೇಂದ್ರ ಕೂಡಾ ತೆರೆದಿದ್ದು, ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪಾರ್ಕ್ಗಳಲ್ಲಿ ಇನ್ನೂ ಈ ನಿಯಮ ಜಾರಿಯಾಗಿಲ್ಲ. ನಿಧಾನವಾಗಿ ಪಾಲಿಕೆ ಸಿಬ್ಬಂದಿಯಿಂದಲೇ ಅನುಷ್ಠಾನಗೊಳ್ಳಲಿದೆ.
ಸಲಹೆ ಸೂಚನೆ ನೀಡಲಾಗಿದೆ:
ಮಾರ್ಗಸೂಚಿಗಳ ಅನುಷ್ಠಾನ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಹೊಸ ಮಾರ್ಗಸೂಚಿ ಕುರಿತಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ನಿಯಮ ಪಾಲಿಸಬೇಕಾದ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಸಲಹೆ ಸೂಚನೆಗಳನ್ನು ಕೊಡಲಾಗಿದೆ.
ಎಲ್ಲರಿಗೂ ಲಿಖಿತ ಸೂಚನೆ ಹೋಗಿದ್ದು, ಅನುಷ್ಠಾನಗೊಳಿಸಲು ಸಮಸ್ಯೆಗಳು ಕಂಡು ಬಂದರೆ, ಅದಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ. ಬಿಬಿಎಂಪಿ ಅಥವಾ ಪೊಲೀಸರು ಪ್ರತಿಯೊಂದು ಕಡೆ ಹೋಗಿ ಪರೀಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಮಾಲ್ನವರೇ ಈ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಈ ಹಿಂದೆ ದಿನಕ್ಕೆ 35 ಸಾವಿರ ಮಂದಿ ಲಸಿಕೆ ಪಡೆದಿದ್ದು, ಈಗ 70 ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಷ್ಟೇ ಅಲ್ಲದೆ, ಮೊಬೈಲ್ ಲಸಿಕಾ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೊದಲನೇ ಡೋಸ್ 90% ಸಂಪೂರ್ಣವಾಗಿದ್ದು, ಎರಡನೇ ಡೋಸ್ನ್ನು ಶೇ. 60 ರಷ್ಟು ಜನರು ಪಡೆದಿದ್ದಾರೆ. ಈ ಪ್ರಮಾಣ ಸದ್ಯದಲ್ಲೇ ಶೇ.75ಕ್ಕೆ ಏರಲಿದೆ. ಲಸಿಕೆ ಪಡೆದವರಿಗೆ ಕೋವಿಡ್ ಬಂದರೂ, ಆಸ್ಪತ್ರೆ ಸೇರುವ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಜೀನೋಮ್ ಸೀಕ್ವೆನ್ಸಿಂಗ್:
ದಕ್ಷಿಣ ಆಫ್ರಿಕಾದಿಂದ ಬರುತ್ತಿರುವ ಎಲ್ಲರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಪಾಸಿಟಿವ್ ಬಂದವರ ಜೀನೋಮ್ ಸೀಕ್ವೆನ್ಸಿಂಗ್ ಕೂಡಾ ಮಾಡಲಾಗುತ್ತಿದೆ. ಈವರೆಗೆ ಮೂವರಲ್ಲಿ ಮಾತ್ರ ಪಾಸಿಟಿವ್ ಬಂದಿದೆ. ಒಬ್ಬರಲ್ಲಿ ಡೆಲ್ಟಾ, ಮತ್ತೊಬ್ಬರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಇನ್ನೊಬ್ಬರ ರಿಪೋರ್ಟ್ ಬರಬೇಕಿದೆ ಎಂದರು.
ಟ್ರಾವೆಲ್ ಹಿಸ್ಟರಿ ಇಲ್ಲದೆ ಬೆಂಗಳೂರಿನವರಿಗೆ ಪಾಸಿಟಿವ್ ಬಂದವರ ಸಂಪರ್ಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಐಸೋಲೇಷನ್ ಮಾಡಲಾಗುತ್ತಿದೆ. ಯಾರೂ ಕಣ್ತಪ್ಪಿಸಿ ಹೋಗದಂತೆ ಈವರೆಗೆ 200 ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು.
ಇತ್ತೀಚಿನ 10 ದಿನದಿಂದ ಅತೀ ಎಚ್ಚರ ವಹಿಸಿ ಏರ್ಪೋರ್ಟ್ ನಿಂದಲೇ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇದಕ್ಕಿಂತ ಹಿಂದೆ ಯಾವುದೇ ಕಠಿಣ ನಿಯಮಗಳು ಇರಲಿಲ್ಲ. ಆದರೆ ಪಾಲಿಕೆ ವತಿಯಿಂದ 10 ದಿನಕ್ಕೆ ಹಿಂದೆ ಬಂದವರನ್ನೂ ಟ್ರ್ಯಾಕ್ ಮಾಡಲಾಗುತ್ತಿದೆ. ಈವರೆಗೆ ಪಾಸಿಟಿವ್ ಬಂದವರು ಎಲ್ಲರೂ ಸಂಪರ್ಕಕ್ಕೆ ಸಿಕ್ಕಿದ್ದಾರೆ ಎಂದು ತಿಳಿಸಿದರು.
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಾಸಿಟಿವ್ ಬಂದರೂ, ತರಗತಿಗಳನ್ನು, ಪರೀಕ್ಷೆಗಳನ್ನು ನಡೆಸುತ್ತಿರುವುದರ ವಿರುದ್ಧ ಕ್ರಮ ಏನು ಎಂದು ಆಯುಕ್ತರನ್ನು ಪ್ರಶ್ನಿಸಿದಾಗ, ಉತ್ತರಿಸಲು ನಿರಾಕರಿಸಿ, ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಜನರ ಸಾಮಾನ್ಯ ಜೀವನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಿಎಂ ನಿರ್ದೇಶನ ನೀಡಿದ್ದಾರೆ. ಕೆಲವು ವಿಚಾರಗಳಲ್ಲಿ ಮಾತ್ರ ನಿರ್ಬಂಧ ಹೇರಲಾಗಿದೆ. ಶಾಲಾ, ಕಾಲೇಜುಗಳಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ ಎಂದು ಹೇಳಿದರು.
ಬೂಸ್ಟರ್ ಡೋಸ್ :
ಬೂಸ್ಟರ್ ಡೋಸ್ ನೀಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಲಸಿಕೆ ಕೇಂದ್ರ ಸರ್ಕಾರದಿಂದ ಬರುವುದರಿಂದ, ಅವರ ಅನುಮತಿ ಅಗತ್ಯ. ಹೀಗಾಗಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಕೊಡಲು ಸಲಹೆ ಇದೆ. ಫೆಬ್ರವರಿ ತಿಂಗಳಲ್ಲೇ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿರುವುದರಿಂದ ಆರು ತಿಂಗಳು, ಒಂದು ವರ್ಷದವರೆಗೆ ಲಸಿಕೆಯ ಪರಿಣಾಮ ಇರುತ್ತದೆ. ಆದರೆ ಈಗಾಗಲೇ ಒಂದು ವರ್ಷ ಪೂರ್ಣವಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಕೊಡುವುದು ಅಗತ್ಯ ಎಂಬ ಸಲಹೆ ತಜ್ಞರಿಂದ ಬಂದಿದೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು.
ಇದನ್ನೂ ಓದಿ: ಕ್ಲಸ್ಟರ್‌ಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ : ಸಿಎಂ ಬೊಮ್ಮಾಯಿ