ಬೆಂಗಳೂರು: ಮಂಗಳೂರಲ್ಲಿ ಪೊಲೀಸರಿಂದ ಇಬ್ಬರು ಸಾವನ್ನಪ್ಪಿರುವ ವಿಚಾರ ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಘಟನೆ ಸಂಬಂಧ ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೊಲೀಸರಿಂದ ಇಬ್ಬರ ಸಾವಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಪ್ರತಿಭಟನೆ ಮಾಡದವರ ಮೇಲೆ ಪೊಲೀಸರು ದರ್ಪ ತೋರಿದ್ದಾರೆ. ಒಂದು ಕಡೆ ಗುಂಪು ಸೇರಿದ್ದಾರೆಂದು ಫೈರ್ ಮಾಡಿದ್ದಾರೆ. ಹೀಗಾಗಿ ಇಬ್ಬರ ಸಾವು ಸಂಭವಿಸಿದೆ. ಇದರ ನೇರ ಹೊಣೆ ಬಿಜೆಪಿ ಸರ್ಕಾರ ಹೊರಬೇಕು. ಮೃತರಿಗೆ ಪರಿಹಾರವನ್ನ ಕೂಡಲೇ ನೀಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಂಡೂರಾವ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಮಾರು 50 ಜನರನ್ನು ಕರೆದು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನಮಗೆ ಅನಿಸಿದ್ದನ್ನ ನಾವು ಹೇಳಿದ್ದೇವೆ. ಕೆಲವು ವಿಚಾರ ಬಹಿರಂಗವಾಗಿ ಹೇಳೋಕೆ ಆಗಲ್ಲ. ಏನು ಹೇಳಬೇಕೋ ಅದನ್ನ ಹೇಳಿದ್ದೇವೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಎಂದು ವಿವರಿಸಿದರು.
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ರಾಜೀನಾಮೆ ವಿಚಾರ ಕುರಿತು ಮಾತನಾಡಿ, ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಪಡೆಯುತ್ತಿದ್ದಾರೆ. 50 ಕ್ಕೂ ಹೆಚ್ಚು ನಾಯಕರ ಅಭಿಪ್ರಾಯ ಪಡೆಯಬೇಕಿದೆ. ಈಗಾಗಲೇ ಹಲವರ ಅಭಿಪ್ರಾಯ ಪಡೆದಿದ್ದಾರೆ. ಖರ್ಗೆ, ಆಸ್ಕರ್ ರಂತವರು ಇವತ್ತು ಬರಲು ಆಗಿಲ್ಲ. ನಾಳೆ ಅವರ ಜೊತೆಯೂ ಮಾತುಕತೆ ನಡೆಸ್ತಾರೆ. ಪಕ್ಷವನ್ನ ಸಂಘಟಿಸುವತ್ತ ಗಮನಹರಿಸಬೇಕು. ಹೀಗಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಕಳಸಾ ನಾಲಾ ಯೋಜನೆಗೆ ಕೇಂದ್ರದ ತಡೆ ವಿಚಾರ ಮಾತನಾಡಿ, ಯೋಜನೆಗೆ ಪರಿಸರ ಇಲಾಖೆಯೇ ಅನುವು ಮಾಡಿ ಕೊಟ್ಟಿತ್ತು. ಈಗ ಪರಿಸರ ಇಲಾಖೆಯೇ ತಡೆ ನೀಡಿದೆ. ಇದು ದುರ್ದೈವದ ಸಂಗತಿ. 2003 ರಿಂದಲೂ ಹೋರಾಟ ನಡೆಯುತ್ತಿದೆ. ನೀರಿನ ಹಕ್ಕಿಗಾಗಿ ಹೋರಾಟ ನಡೆದಿದೆ. ಹೀಗಿರುವಾಗ ತಡೆ ನೀಡಿದ್ದು ಸರಿಯಲ್ಲ ಎಂದರು.