ಬೆಂಗಳೂರು: ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗೆ ಗಂಭೀರ ಗಾಯವಾಗಿರುವ ಘಟನೆ ಕಾಟನ್ ಪೇಟೆಯ ಭಕ್ಷಿ ಗಾರ್ಡನ್ನಲ್ಲಿ ನಡೆದಿದೆ.
ಬೆಳಿಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾವೇರಿ (21), ಶ್ರೀಕಾಂತ್ (13) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಹಾಗೆಯೇ ಪತಿ ಮುರಳಿ, ಪತ್ನಿ ಗೀತಾರಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮುಂಜಾನೆ ಮುರುಳಿ ಪೆಟ್ರೋಲ್ ತಂದು ಮಲಗಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳ ಮೇಲೆ ಸುರಿದು ಬೆಂಕಿ ಹಚ್ಚಿರಬಹುದೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆಯಾ? ಅಥವಾ ಕೊಲೆ ಮಾಡಲಾಗಿದೆಯಾ? ಅನ್ನೋದರ ಬಗ್ಗೆ ಕಾಟನ್ ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.