ಬೆಂಗಳೂರು : ಜೋಳದಿಂದ ಎಥನಾಲ್ ಇಂಧನ ತಯಾರಿಕೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಟಿವಿಎಸ್ ಮೋಟರ್ ಕಂಪನಿ ಹೊರತಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಆಟೋ ಮೊಬೈಲ್ ಕ್ಷೇತ್ರ ಉದ್ಯೋಗ ಅವಕಾಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟಿವಿಎಸ್ ಸಂಸ್ಥೆ ಎಥನಾಲ್ ಬಳಸಿ ವಾಹನಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸದ ವಿಷಯ. ಇದರಿಂದ ಕಬ್ಬು ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರು ಅಭಿವೃದ್ಧಿ ಹೊಂದಲಿದ್ದಾರೆ. ಕಬ್ಬಿನಿಂದ ತಯಾಸುವ ಎಥನಾಲ್‌ನಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕವಾಗಿ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಪರ್ಯಾಯ ಇಂಧನಕ್ಕೆ ನಿರಂತರವಾಗಿ ಚಿಂತನೆ ನಡೆಸಿದ್ದೇನೆ. ನನ್ನ ಕ್ಷೇತ್ರ ನಾಗಪೂರದಲ್ಲಿ ಕೊಳಚೆ ನೀರಿನಿಂದ ಮಿಥೇನ್ ಇಂಧನ ತಯಾರಿಗೆ ಅನುಮತಿ ನೀಡಲಾಗಿದೆ. ಪ್ರಸ್ತುತ ವಿದ್ಯುತ್ ಚಾಲಿತ ಬೈಕ್, ಕಾರು ಹಾಗೂ ಎಲೆಕ್ಟ್ರಿಕ್ ಬಸ್ಗಳಲ್ಲಿ ಜನ ಪ್ರಯಾಣಿಸುತ್ತಿದ್ದಾರೆ. ಈ ವರ್ಷ 10 ಸಾವಿರ ವಿದ್ಯುತ್ ಚಾಲಿತ ಬಸ್ಗಳು ದೇಶದಲ್ಲಿ ರಸ್ತೆಗಿಳಿಯುವ ನಿರೀಕ್ಷೆ ಇದೆ. ಮುಂದಿನ ತಿಂಗಳೊಳಗೆ ದೇಶದಲ್ಲಿ ಬಯೋ ಸಿಎನ್ಜಿ ಆಧಾರಿತ 400 ಬಸ್ಗಳು ರಸ್ತೆಗಿಳಿಯಲಿವೆ. ಅಷ್ಟೇ ಅಲ್ಲದೇ ಬಯೋ ಇಂಧನ ಬಳಸಿ ಹೆಲಿಕಾಪ್ಟರ್ನ್ನೂ ಚಾಲನೆ ಮಾಡಬಹುದು. ಪ್ರಸ್ತುತ ವಿಮಾನದ ಇಂಧನ ಆಮದು ಹೆಚ್ಚಾಗಿದೆ. ಇದಕ್ಕೆ ಪರ್ಯಾಯ ಬಯೋ ಇಂಧನ ಬಳಸಬಹುದು ಎಂದರು.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಬರುವುದರಿಂದ ಸರ್ಕಾರದ ಯೋಜನೆಯಾದ ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾ ಸಫಲವಾಗಲಿದೆ ಎಂದ ಅವರು, ನಮ್ಮ ದೇಶದ ಕೈಗಾರಿಕೆಗಳಲ್ಲಿ ವಿದ್ಯುತ್ ಚಾಲಿತ ವಾಹನಕ್ಕೆ ಬೇಕಾಗುವ ಎಲ್ಲಾ ಉಪಕರಣಗಳನ್ನು ಉತ್ಪಾದಿಸಬಹುದು ಎಂದು ವಿವರಿಸಿದರು. ಇ-ಹೈವೇ ಮುಂಬೈನಿಂದ ದೆಹಲಿವರೆಗೂ ನಿರ್ಮಾಣ ಮಾಡುತ್ತಿದೆ. ಆ ಮೂಲಕ ಹಿಂದುಳಿದ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಲಾಗುವುದು. ಪ್ರಸ್ತುತ ನಿರ್ಮಾಣವಾಗುತ್ತಿರುವ ಇ-ಹೈವೇ ಜನವರಿ 2024ರ ಒಳಗೆ ಪೂರ್ಣಗೊಳ್ಳಲಿದೆ. ಇದು ವಿಶ್ವಕ್ಕೆ ಒಂದು ಮಾದರಿ ಹೈವೇ ಆಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಬೆಂಗಳೂರು ದೇಶದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ನಗರ. ಹಾಗಾಗಿ, ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಎಲೆಕ್ಟ್ರಿಕ್ ಬೈಕ್ಗಳು ಬರುವುದರಿಂದ ವಾಯುಮಾಲಿನ್ಯ ಕಡಿಮೆಯಾಗಲು ಸಹಕಾರಿಯಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಚಿಂಗ್ ಮಾಡಿಕೊಳ್ಳಲು ಚಾರ್ಚಿಂಗ್ ಪಾಯಿಂಟ್ಗಳನ್ನು ಈಗಾಗಲೇ ನಗರದ ಕೆಲ ಕಡೆ ಪ್ರಾರಂಭಿಸಿದ್ದಾರೆ. ಟಿವಿಎಸ್ ಸಂಸ್ಥೆಯ ಸಹಯೋಗದೊಂದಿಗೆ ಹೆಚ್ಚಿನ ಚಾರ್ಚಿಂಗ್ ಪಾಯಿಂಟ್ ಒದಗಿಸುವ ಯೋಜನೆಯಲ್ಲಿ ಸರ್ಕಾರ ಹಾಗೂ ಬೆಸ್ಕಾಂ ಬದ್ಧವಾಗಿದೆ ಎಂದು ಹೇಳಿದರು.
ಟಿವಿಎಸ್ ಮೋಟರ್ ಕಂಪನಿ ಅಧ್ಯಕ್ಷ ವೇಣು ಶ್ರೀನಿವಾಸನ್ ಮಾತನಾಡಿ, ಟಿವಿಎಸ್ ಮೋಟರ್ ಸಂಸ್ಥೆಯನ್ನು ಗ್ರಾಹಕ ಕೇಂದ್ರಿತ ನಾವೀನ್ಯತೆಯಿಂದ ನಡೆಸಲಾಗುತ್ತದೆ. ನಮ್ಮ ದೃಷ್ಟಿ ಇರುವುದು ಪರಿಸರ ಸ್ನೇಹಿ ಹಾಗೂ ಸಂಪರ್ಕಿತ ಯುವ ಭಾರತದ ಮೇಲೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅತ್ಯಾಧುನಿಕ ಎಲೆಕ್ಟ್ರಿಕ್ ಡ್ರೈವ್ ಟ್ರೈನ್ ಮತ್ತು ಮುಂದಿನ ಪೀಳಿಗೆಯ ಟಿವಿಎಸ್ ಸ್ಮಾರ್ಟ್ ಎಕ್ಸ್ ಕನೆಕ್ಟ್ ಪ್ಲಾಟ್ ಫಾರಂನ ಸಂಯೋಜನೆಯಾಗಿದೆ ಎಂದರು.