ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಶನಿವಾರ ನಡೆದ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ತೆಲಂಗಾಣದ ಮೆಹಬೂಬಾಬಾಸ್ನ ವಿದ್ಯಾರ್ಥಿನಿ ಡಿ.ಅಂಜಲಿ ಇನ್ಫೋಸಿಸ್ ಟ್ರಾವೆಲ್ ಅವಾರ್ಡ್ ಗಳಿಸಿದ್ದಾರೆ.
ಡಿ ಅಂಜಲಿ ಟ್ರೈಬಲ್ ವಿದ್ಯಾರ್ಥಿನಿಯಾಗಿದ್ದು, ಅವರ ಕುಟುಂಬದಲ್ಲಿ ಶಿಕ್ಷಣ ಪಡೆದ ಮೊದಲ ವಿದ್ಯಾರ್ಥಿನಿಯಾಗಿದ್ದಾರೆ. ಪ್ರಸ್ತುತ ಒಂಭತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಂಜಲಿ, ಕಳೆದ ಎರಡು ವರ್ಷದ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಪ್ರಭಾವದ ಕುರಿತು ಬರೆದ ಪ್ರಬಂಧಕ್ಕೆ ಈ ಪ್ರಶಸ್ತಿ ಸಿಕ್ಕಿದೆ.
ಚಂದ್ರಯಾನ 2 ಹಾಗೂ ಒಂದು ರಾಕೆಟ್ನಲ್ಲಿ ಒಂದೇ ಬಾರಿಗೆ ಎಂಟು ಉಪಗ್ರಹ ಉಡಾವಣೆ ಮಾಡಿರುವ ಇಸ್ರೋ ಸಾಧನೆ ನಮ್ಮ ದೇಶಕ್ಕೆ ಹೆಮ್ಮೆಯ ವಿಷಯ. ಕ್ಯಾನ್ಸರ್ನಂತಹ ಅನೇಕ ಮಾರಕ ರೋಗಗಳಿಗೆ ನಮ್ಮ ವೈದ್ಯಕೀಯ ವಿಜ್ಞಾನ ಔಷಧಿ ಕಂಡುಹಿಡಿದಿದೆ. ಇನ್ನು ಕೃಷಿ ವಿಚಾರಕ್ಕೆ ಬಂದರೆ ಬೀಜಗಳಲ್ಲಿನ ಡಿಎನ್ಎ ತೆಗೆದುಕೊಂಡು ಅವನ್ನು ಹೈಬ್ರಿಡ್ ಮಾಡಿ ಉತ್ತಮ ಬೆಳೆಗಳ ಉತ್ಪಾದನೆಗೆ ವಿಜ್ಞಾನ-ತಂತ್ರಜ್ಞಾನ ಸಹಕರಿಸಿದೆ. ಈ ಎಲ್ಲಾ ವಿಷಯಗಳು ನನಗೆ ಪ್ರಬಂಧ ಬರೆಯಲು ಆಸಕ್ತಿ ಹುಟ್ಟಿಸಿತು ಎಂದು ಪ್ರಶಸ್ತಿ ವಿಜೇತೆ ಅಂಜಲಿ ತಿಳಿಸಿದ್ದಾರೆ.
ನಮ್ಮ ವಿದ್ಯಾರ್ಥಿನಿ ಅಂಜಲಿ ಬುಡಕಟ್ಟು ಜನಾಂಗದಿಂದ ಬಂದವಳು. ಆಕೆಯ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಆಕೆಯ ಸಾಧನೆಯನ್ನು ಈ ವೇದಿಕೆ ಗುರುತಿಸಿದ್ದು, ಭವಿಷ್ಯದಲ್ಲಿ ಆಕೆ ವಿಜ್ಞಾನಿಯಾಗಲಿ ಎಂದು ಅಂಜಲಿಯ ಮಾರ್ಗದರ್ಶಕರಾದ ಡಾ.ಗುರುನಾಥ್ ರಾವ್ ಹೇಳಿದರು.