ಬೆಂಗಳೂರು: ಟ್ರಾವೆಲ್ಸ್ ಹೆಸರಿನಲ್ಲಿ ಚಾಲಕರಿಂದ ಕಾರುಗಳನ್ನು ಅಟ್ಯಾಚ್ ಮಾಡಿಕೊಂಡು ವಂಚನೆ ಮಾಡಿರುವ ಆರೋಪದಡಿ ಟ್ರಾವೆಲ್ಸ್ ಏಜೆನ್ಸಿ ಮಾಲೀಕನ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೊಳಗಾದ ಯಶಸ್ ಎಂಬುವರು ನೀಡಿದ ದೂರಿನ ಮೇರೆಗೆ ಆರ್.ಎಸ್.ಟ್ರಾವೆಲ್ಸ್ ಮಾಲೀಕ ಶಿವಕುಮಾರ್, ಟ್ರಾವೆಲ್ಸ್ ಮ್ಯಾನೇಜರ್ ಕೃಷ್ಣೇಗೌಡ ಹಾಗೂ ಶ್ರೀಕಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂಲತಃ ಸರ್ಜಾಪುರದವನಾದ ಶಿವಕುಮಾರ್ ಬಾಗಲುಗುಂಟೆ ಎಂಇಐ ಲೇಔಟ್ನಲ್ಲಿ ಆರ್.ಎಸ್.ಟ್ರಾವೆಲ್ಸ್ ಹೆಸರಲ್ಲಿ ಕಚೇರಿ ತೆರೆದಿದ್ದ. ಕೊರೊನಾ ಎರಡನೇ ಅಲೆ ವೇಳೆ ಲಾಕ್ಡೌನ್ ಹಿನ್ನೆಲೆ, ಕ್ಯಾಬ್ ಮಾಲೀಕರು ಬಾಡಿಗೆ ಇಲ್ಲದೇ, ಕಾರುಗಳಿಗೆ ಇಎಂಐ ಕಟ್ಟಲಿಕ್ಕಾಗದೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರ್.ಎಸ್. ಟ್ರಾವೆಲ್ಸ್ ಮಾಲೀಕ ಶಿವಕುಮಾರ್ ಟಯೋಟಾ ಇಟಿಯೋಸ್ ಇನೋವಾ ಸ್ವಿಫ್ಟ್ ಅಸೆಂಟ್ ಕಾರುಗಳನ್ನ ಅಟ್ಯಾಚ್ ಮಾಡಿಕೊಂಡಿದ್ದರು.
ಪ್ರತಿ ತಿಂಗಳು 8ರಂದು ಕ್ಯಾಬ್ ಮಾಲೀಕರಿಗೆ ಬಾಡಿಗೆ ಹಣವನ್ನ ಅಕೌಂಟ್ಗೆ ಹಾಕುತ್ತಿದ್ದ. ಆದರೆ, ಈ ತಿಂಗಳು ಬಾಡಿಗೆ ಹಣವನ್ನ ಹಾಕಿರಲಿಲ್ಲ. ಕಾರು ಅಟ್ಯಾಚ್ ಮಾಡಿರುವ ಮಾಲೀಕರು ಟ್ರಾವೆಲ್ಸ್ ಕಚೇರಿ ಬಳಿ ಬಂದಾಗ ಕಾರುಗಳ ಸಮೇತ ಟ್ರಾವೆಲ್ಸ್ ಸಿಬ್ಬಂದಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಭರ್ಜರಿ ಆಫರ್ ಮಾಡಲಾಗುತ್ತಿತ್ತು: ಬೇರೆ ಕಡೆಗಿಂತಲೂ ನಾವು ಹೆಚ್ಚಿನ ಬಾಡಿಗೆ ಕೊಡುತ್ತೇವೆ ಎಂದು ಆರ್.ಎಸ್.ಟ್ರಾವೆಲ್ಸ್ನಲ್ಲಿ ಕ್ಯಾಬ್ ಮಾಲೀಕರಿಗೆ ಆಫರ್ ಮಾಡಲಾಗುತ್ತಿತ್ತು. ಸ್ವಿಫ್ಟ್ ಕಾರಿಗೆ 16 ಸಾವಿರ ಇಟಿಯೋಸ್ ಕಾರಿಗೆ 20 ಸಾವಿರ ಇನೋವಾ ಕ್ರಿಸ್ಟಾ ಕಾರಿಗೆ 30 ಸಾವಿರ ಬಾಡಿಗೆ ನೀಡುವುದಾಗಿ ಕಾರುಗಳನ್ನ ಅಟ್ಯಾಚ್ ಮಾಡಿಕೊಳ್ಳಲಾಗುತ್ತಿತ್ತು.
ಇದೇ ನವೆಂಬರ್ 7ರಂದು ಮೊದಲಿಗೆ ಶಿವಕುಮಾರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಎರಡು ದಿನಗಳ ನಂತರ ಟ್ರಾವೆಲ್ಸ್ ಮ್ಯಾನೇಜರ್ ಕೃಷ್ಣೇಗೌಡ ಹಾಗೂ ಸೂಪರ್ ವೈಸರ್ ಶ್ರೀಕಾಂತ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಬಾಗಲುಗುಂಟೆಯ ಆರ್.ಎಸ್.ಟ್ರಾವೆಲ್ಸ್ನಲ್ಲಿ ಕಾರುಗಳನ್ನು ಅಟಾಚ್ ಮಾಡಿದ್ದ 130ಕ್ಕೂ ಹೆಚ್ಚು ಮಂದಿ ಬಾಗಲುಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನನ್ವಯ ಪರಾರಿಯಾಗಿರುವ ಟ್ರಾವೆಲ್ಸ್ ಮಾಲೀಕ ಶಿವಕುಮಾರ್ ಸಿಬ್ಬಂದಿ ಕೃಷ್ಣೇಗೌಡ ಹಾಗೂ ಶ್ರೀಕಾಂತ್ ಬಂಧನಕ್ಕಾಗಿ ಪೊಲೀಸರು ಮೂರು ಪ್ರತ್ಯೇಕ ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಸಾಲ ಮಾಡಿ ಕಾರು ಖರೀದಿ ಮಾಡಿದವರು ಕಾರಿನ ಇಎಂಐ ಕಟ್ಟಲಾಗದೇ ಜೀವನಕ್ಕೆ ಆಧಾರವಾಗಿದ್ದ ಕಾರುಗಳನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ.
ಇದನ್ನೂ ಓದಿ: ಖಾಲಿ ಪತ್ರಕ್ಕೆ ಹೆಣದ ಹೆಬ್ಬೆಟ್ಟು ಪಡೆದ ಪ್ರಕರಣ.. ಈವರೆಗೆ ಯಾರನ್ನೂ ಬಂಧಿಸಿಲ್ಲ: ಡಾ. ಚಂದ್ರಗುಪ್ತ ಸ್ಪಷ್ಟನೆ