ದೊಡ್ಡಬಳ್ಳಾಪುರ : ಕೆಲಸಕ್ಕೆ ಸೇರಿದ 15 ದಿನಕ್ಕೆ ಯಂತ್ರಕ್ಕೆ ಸಿಲುಕಿ ಟ್ರೈನಿ (ತರಬೇತಿ ಪಡೆಯುವ ವ್ಯಕ್ತಿ) ಉದ್ಯೋಗಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಟಾಫೆ ಇಪಿಡಿಯಲ್ಲಿ ನಡೆದಿದೆ. ಕಂಪನಿಯ ನಿರ್ಲಕ್ಷ್ಯದಿಂದ ಉದ್ಯೋಗಿ ಸಾವನ್ನಪ್ಪಿದ್ದಾನೆ ಎಂದು ಲೇಬರ್ ಯೂನಿಯನ್ ಆರೋಪಿಸಿದೆ.
ಲಕ್ಷ್ಮಿ ನಾರಾಯಣ್ (19) ಮೃತ ಉದ್ಯೋಗಿ. ಈತ ಕೆಲವೇ ದಿನಗಳ ಹಿಂದೆಯಷ್ಟೇ ಡಿಪ್ಲೊಮಾ ಮುಗಿಸಿ ಟಾಫೆ ಕಾರ್ಖಾನೆಯಲ್ಲಿ ಇಂಡಸ್ಟ್ರೀಯಲ್ ಟ್ರೈನಿಂಗ್ಗಾಗಿ ಬಂದಿದ್ದ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮ್ ನೇರು ಗ್ರಾಮ ನಿವಾಸಿ ಲಕ್ಷ್ಮಿ ನಾರಾಯಣ್, ಬಾಶೆಟ್ಟಿಹಳ್ಳಿಯ ಪಿಜಿಯೊಂದರಲ್ಲಿ ವಾಸವಾಗಿದ್ದ. ಟಾಫೆ ಕಾರ್ಖಾನೆಗೆ ಕೆಲಸಕ್ಕೆಂದು ಹೋಗುತ್ತಿದ್ದ.
ಕಾರ್ಖಾನೆ ವಿರುದ್ಧ ನಿರ್ಲಕ್ಷ್ಯ ಆರೋಪ : ಟಾಫೆ ಕಾರ್ಖಾನೆ ಕಡಿಮೆ ಸಂಬಳ ನೀಡಿ, ಹೊರ ರಾಜ್ಯದಿಂದ ಐಟಿಐ, ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗಳನ್ನ ಕರೆ ತಂದು ಟ್ರೈನಿ ಉದ್ಯೋಗ ಕೊಡುತ್ತಿತ್ತು. ಮೃತ ಯುವಕ ಲಕ್ಷ್ಮಿ ನಾರಾಯಣ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಆಯ್ಕೆಯಾಗಿದ್ದ.
ಕೆಲಸಕ್ಕೆ ಸೇರಿದ 15 ದಿನಗಳಲ್ಲಿಯೇ ಅಪಾಯಕಾರಿ ಯಂತ್ರ ನಿರ್ವಹಿಸಲು ಬಿಟ್ಟಿದ್ದರು. ಯಂತ್ರ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದೇ ನಿರ್ವಹಣೆ ಮಾಡುವಾಗ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.
ಟ್ರೈನಿ ಯುವಕರನ್ನ ಅಪಾಯಕಾರಿ ಯಂತ್ರಗಳ ನಿರ್ವಹಣೆಗೆ ಬಿಟ್ಟಿದ್ದರಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಲೇಬರ್ ಯೂನಿಯನ್ ಆರೋಪ ಮಾಡಿದೆ. ಅಲ್ಲದೇ ಮೃತ ಯುವಕನಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಟಾಫೆ ಕಾರ್ಖಾನೆ ಮುಂದೆ ಕಾರ್ಮಿಕರು ಪ್ರತಿಭಟಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಈಜಲು ಹೋಗಿ ಪ್ರಾಣ ಕಳೆದುಕೊಂಡ ನಾಲ್ವರು ಹುಡುಗಿಯರು.. ಕುಟುಂಬದಲ್ಲಿ ಮಡುಗಟ್ಟಿದ ಶೋಕ..