ಬೆಂಗಳೂರು: ಟೌನ್ಹಾಲ್ ಮುಂಭಾಗ ಪ್ರತಿಭಟನೆ ಮಾಡದಂತೆ ನಿಷೇಧ ಹೇರಿರುವುದನ್ನು ವಿರೋಧಿಸಿ ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಪಕ್ಷ ನಾಯಕ ವಾಜಿದ್ ನಿರ್ಣಯ ಪ್ರತಿ ಹರಿದುಹಾಕಿದರು.
ಕಾಂಗ್ರೆಸ್ ಕೆಲ ಗಂಟೆಗಳ ಕಾಲ ಸಭಾತ್ಯಾಗ ಮಾಡಿದೆ. ಬಳಿಕ ಬಿಜೆಪಿ ಸದಸ್ಯರಷ್ಟೇ ಪಾಲಿಕೆ ನೌಕರರು, ಅಧಿಕಾರಿಗಳ ಸಮಸ್ಯೆ ಕುರಿತು ಚರ್ಚೆ ನಡೆಸಿದರು. ಇನ್ನೊಂದೆಡೆ ಮುಂಬಡ್ತಿ, ನೌಕರರ ಹೆಲ್ತ್ ಕಾರ್ಡ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿರುವ ನಾಲ್ಕನೇ ದರ್ಜೆಯ ನೌಕಕರಗೆ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿ ಅರ್ಹ ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕಂದಾಯ ವಸೂಲಿಗಾರರು ಮತ್ತು ದ್ವಿತೀಯ ದರ್ಜೆ ಗುಮಾಸ್ತರಾಗಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಬಿಬಿಎಂಪಿ ಸೇವೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಿಯೋನಿಕ್ಸ್ ಸಂಸ್ಥೆಯಿಂದ ಕಾನೂನು ಬಾಹಿರವಾಗಿ ಸಹಾಯಕ ಅಭಿಯಂತರ ನೇಮಿಸಿಕೊಂಡಿರುವುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪಾಲಿಕೆಯಲ್ಲಿ ಖಾಲಿ ಇರುವ 707 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಹಾಗೂ ಕೌನ್ಸಿಲ್ ಅನುಮೋದನೆ ನೀಡಿದೆ. ಆದರೂ ಕೂಡ ಇಲ್ಲಿಯವರಿಗೆ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಇರುವ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ 707 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.