ಬೆಂಗಳೂರು: ನಗರದಲ್ಲಿ ಬೆಳಕಿಗೆ ಬಂದಿರುವ ಪ್ರಕರಣವೊಂದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತೆಲುಗು ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಹರಿಣಿ ಅವರ ತಂದೆ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಯಲಹಂಕ-ರಾಜಾನುಕುಂಟೆ ಪ್ರದೇಶದ ರೈಲ್ವೆ ಹಳಿ ಮಧ್ಯೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಲಹಂಕ ಹಾಗು ರಾಜಾನುಕುಂಟೆ ರೈಲ್ವೆ ಟ್ರ್ಯಾಕ್ನಲ್ಲಿ ಚಾಕುವಿನಿಂದ ಕೈ ಹಾಗು ಕತ್ತಿಗೆ ಚುಚ್ಚಿಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣ ಮೂಲದ ಎ.ಕೆ. ರಾವ್ ಹಲವು ದಿನಗಳಿಂದ ಕಣ್ಮರೆಯಾಗಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರಾವ್ ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು.
ರಾವ್ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ನ.22ರಂದು ರಾತ್ರಿ ಯಲಹಂಕ- ರಾಜಾನುಕುಂಟೆ ರೈಲ್ವೆ ಹಳಿ ಮಧ್ಯೆ ಚಾಕುವಿನಿಂದ ಚುಚ್ಚಿಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಬೆಂಗಳೂರು ನಗರ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾವ್ ಕುಟುಂಬಸ್ಥರು ಪರಿಶೀಲಿಸಿ ರಾವ್ ಅವರ ಸಾವು ಸಹಜ ಸಾವಲ್ಲ. ಇದೊಂದು ಕೊಲೆ ಎಂದು ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾವನ್ನಪ್ಪಿರುವ ಎ.ಕೆ. ರಾವ್ ಬಳಿ ಆಧಾರ್ ಕಾರ್ಡ್, ಕೆಲ ದಾಖಲಾತಿ ಜತೆಗೆ ವಂಚನೆ ಪ್ರಕರಣವೊಂದರ ಬಗ್ಗೆ ನೀಡಬೇಕಿದ್ದ ದೂರಿನ ಪ್ರತಿ ಪತ್ತೆಯಾಗಿದೆ. ಈ ಜಾಡು ಹಿಡಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.