ಬೆಂಗಳೂರು : ಏಕೈಕ ಕನ್ನಡಿಗನಾಗಿ ಭಾರತದ ಪ್ರಧಾನಿ ಹುದ್ದೆಗೇರಿದ ಕೀರ್ತಿ ಹೆಚ್.ಡಿ. ದೇವೇಗೌಡರಿಗೆ ಸಲ್ಲುತ್ತದೆ. ಕೇವಲ ಹನ್ನೊಂದು ತಿಂಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಅವರು ಆನೇಕ ಯೋಜನೆಗಳಿಗೆ ಮುನ್ನುಡಿ ಹಾಕಿಕೊಟ್ಟರು.
ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಯ ಸುಧಾರಕರಾಗಿದ್ದ ದೇವೇಗೌಡರು, ರಾಜಕಾರಣದಲ್ಲಿ ನಡೆದು ಬಂದ ಹಾದಿಯೇ ತುಂಬಾ ರೋಚಕ. ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದೊಡ್ಡಗೌಡರು ರಾಜಕೀಯದಲ್ಲಿ ನಡೆದು ಬಂದ ಹಾದಿ ಮತ್ತು ಸಾಧನೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ದೇವೇಗೌಡರು ಮೇ 18, 1933ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪಡೆದಿರುವ ಗೌಡರು, ತಮ್ಮ 20ನೇ ವಯಸ್ಸಿನಲ್ಲೇ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು.
ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಏಳಿಗೆಗಾಗಿ ಹೋರಾಟ ಮಾಡುವುದಾಗಿ ಘೋಷಿಸಿದ್ದರು.
1975-76ರ ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಸಹ ಅನುಭವಿಸಿದ್ದರು. ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಂಡರು. ಈಗಲೂ ಸಹ ಅವರು ನಿರಂತರ ಓದುವಿಕೆಯನ್ನು ಬಿಟ್ಟಿಲ್ಲ. ಮನೆಯಲ್ಲಿ ದಿನ ಪತ್ರಿಕೆ ಜೊತೆಗೆ ಆನೇಕ ಪುಸ್ತಕಗಳನ್ನು ಓದುತ್ತಾರೆ.
ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾಗಲೇ ಬಡಜನರ ಸೇವೆಯಲ್ಲಿ ಹೆಸರಾಗಿದ್ದರು. ನಂತರ ಅವರು ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಕೇವಲ 28 ವರ್ಷ ಇದ್ದಾಗಲೇ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1962ರಲ್ಲಿ ಕರ್ನಾಟಕ ವಿಧಾನಸಭೆ ಪ್ರವೇಶಿಸಿದರು.
ವಿಧಾನಸಭೆಯಲ್ಲಿ ಪರಿಣಾಮಕಾರಿ ಭಾಷಣಗಾರರಾದ ಇವರು ತನ್ನ ಹಿರಿಯರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊಳೆನರಸೀಪುರ ಕ್ಷೇತ್ರದಿಂದ 1967-71, 1972-77 ಹಾಗೂ 1978-83 ಸತತ ಮೂರು ಬಾರಿ ಚುನಾಯಿತರಾದರು. ಗೌಡರು ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾದರು.
1982, ನವೆಂಬರ್ 22 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮತ್ತೆ ಗೆದ್ದು ಬಂದ ಗೌಡರು, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ನೀರಾವರಿ ಸಚಿವರಾಗಿದ್ದ ಅವರ ಅವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡಲಿಲ್ಲ ಎಂಬ ಕಾರಣಕ್ಕೆ 1987ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಪ್ರವೇಶಿಸಿದ ದೇವೇಗೌಡರು, ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿ ಪಾತ್ರವಹಿಸಿದರು. ಸಂಸತ್‌ನಲ್ಲಿ ರೈತರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ಕೃಷಿಕರ ದನಿಯಾದರು.
ದೇವೇಗೌಡರು ರಾಜ್ಯ ಮಟ್ಟದಲ್ಲಿ ಎರಡು ಬಾರಿ ಜನತಾ ಪಕ್ಷದ ಅಧ್ಯಕ್ಷರು ಹಾಗೂ 1994ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1994ರಲ್ಲಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ಇವರು ಮಹತ್ವದ ಪಾತ್ರವಹಿಸಿದರು. 1994, ಡಿಸೆಂಬರ್ 11ರಂದು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಆನಂತರ ಇವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ತಮ್ಮ ಸಕ್ರಿಯ ರಾಜಕಾರಣ ಮತ್ತು ಬೇರುಮಟ್ಟದ ಭದ್ರ ಬುನಾದಿಯಿಂದಾಗಿ ರಾಜ್ಯ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ನೇರವಾಗಿ ಕೈಗೆತ್ತಿಕೊಂಡರು.
ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಮುಂಚೂಣಿಗೆ ತಂದಾಗ ಅವರ ರಾಜಕೀಯ ಕುಶಾಗ್ರಮತಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು. ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೈದಾನವಾಗಿದ್ದು, ರಾಜಕೀಯ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಗೌಡರು ಈ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ಲೆಕ್ಕಾಚಾರ ಬದಲಿಸಿದ ಗೌಡರು! : 1989ರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದಾಗ ದೇವೇಗೌಡರು ರಾಜಕೀಯ ನೇಪಥ್ಯಕ್ಕೆ ಸರಿಯಲಿದ್ದಾರೆ ಎಂಬುವುದೇ ಹಲವಾರು ಮಂದಿಯ ಲೆಕ್ಕಾಚಾರವಾಗಿತ್ತು. ಆದರೆ, 1990ರಲ್ಲಿ ರಾಷ್ಟ್ರಮಟ್ಟದ ರಾಜಕೀಯ ಚಿತ್ರಣ ಬದಲಾಗಿ ಚಂದ್ರಶೇಖರ್ ಅವರು ಪ್ರಧಾನಿಯಾದರು.
ಚಂದ್ರಶೇಖರ್‌ರವರು ಬೊಮ್ಮಾಯಿಯವರಂತೆ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗುವ ಅವಕಾಶವನ್ನು ದೇವೇಗೌಡರಿಗೂ ನೀಡಿದ್ದರು. ಆ ಮಟ್ಟಿನ ವಿಶ್ವಾಸ ಪ್ರಧಾನಿ ಚಂದ್ರಶೇಖರ್ ಅವರಿಗೆ ದೇವೇಗೌಡರ ಮೇಲಿತ್ತು. ಮುಂದೆ ದೇವೇಗೌಡರೇ ದೇಶದ ಪ್ರಧಾನಿಯಾದರು. 1996 ಮೇ 30 ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಕೇವಲ ಹನ್ನೊಂದು ತಿಂಗಳಲ್ಲಿ ಇಡೀ ದೇಶ ತಿರುಗಿ ನೋಡುವಂತ ಸಾಧನೆ ಮಾಡಿ ತೋರಿಸಿದವರಲ್ಲಿ ದೇವೇಗೌಡರ ಹೆಸರು ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು.
ಕೆಲವೊಂದು ಕಾರಣದಿಂದ ಅಧಿಕಾರದಿಂದ ಇಳಿಯಬೇಕಾದ ಪರಿಸ್ಥಿತಿ ಎದುರಾದಾಗ, ವಿರೋಧ ಪಕ್ಷದ ನಾಯಕರಾದ ವಾಜಪೇಯಿ ಅವರು ಚೀಟಿಯೊಂದನ್ನು ದೇವೇಗೌಡರಿಗೆ ಕಳುಹಿಸಿ ನಾವು ನಿಮ್ಮ ಬೆಂಬಲಕ್ಕಿದ್ದೇವೆ ನೀವು ನಿಮ್ಮ ಆಡಳಿತವನ್ನು ಮುಂದುವರೆಸಿ ಎಂದು ಹೇಳುವ ಮಟ್ಟಿನ ವಿಶ್ವಾಸ ದೇವೇಗೌಡರು ಹಾಗೂ ವಾಜಪೇಯಿಯವರ ಮಧ್ಯೆಯೂ ಇತ್ತು. ಆದರೆ, ಸೈದ್ಧಾಂತಿಕ ಭಿನ್ನತೆಯಿಂದಾಗಿ ದೇವೇಗೌಡರು ಈ ಅವಕಾಶವನ್ನು ಉಪಯೋಗಿಸಿಕೊಳ್ಳದೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇತಿಹಾಸ.
ದೇವೇಗೌಡರು ಪ್ರಧಾನಿ ಸ್ಥಾನದಲ್ಲಿದ್ದಿದ್ದು ಬರೀ ಹನ್ನೊಂದು ತಿಂಗಳಾದರೂ ದೇಶದ ಅಭಿವೃದ್ಧಿಯಲ್ಲಿ ದೇವೇಗೌಡರ ಪಾತ್ರ ಮಹತ್ವದ್ದಾಗಿದೆ. ಕೆಲವು ವರ್ಷಗಳಿಂದ ಜಮ್ಮು ಕಾಶ್ಮೀರದಲ್ಲಿ ನಿಂತೇ ಹೋಗಿದ್ದ ಚುನಾವಣಾ ಪ್ರಕ್ರಿಯೆಗಳಿಗೆ ಮತ್ತೆ ಚಾಲನೆ ನೀಡಿ ಅಲ್ಲಿ ಶಾಂತಿಯುತ ಮತದಾನವಾಗುವಲ್ಲಿ ದೇವೇಗೌಡರ ಪಾತ್ರವನ್ನು ಯಾರೂ ಮರೆಯುವಂತಿಲ್ಲ. ಈಶಾನ್ಯ ರಾಜ್ಯಗಳಿಗೆ 10 ಸಾವಿರ ಕೋಟಿ ವಿಶೇಷ ಅನುದಾನ ನೀಡಿದ್ದು, ಹತ್ತು ವರ್ಷಗಳ ಕಾಲ ಐಟಿ ವಿಭಾಗಕ್ಕೆ "ಟ್ಯಾಕ್ಸ್ ಹಾಲಿಡೇ" ಘೋಷಿಸುವ ಮೂಲಕ ಐಟಿ ಉದ್ಯಮವು ದೇಶದಲ್ಲಿ ಹೆಮ್ಮರವಾಗುವಂತೆ ಮಾಡಿದ್ದು ಸಹ ಗೌಡರ ಸಾಧನೆ.
ಸರ್ದಾರ್ ಸರೋವರ್ ಡ್ಯಾಮ್ ವಿಚಾರದಲ್ಲಿ ನಾಲ್ಕು ರಾಜ್ಯಗಳ ನಡುವಿನ ವಿವಾದ ಬಗೆಹರಿಸಿ ಗುಜರಾತಿನ 9,633 ಹಳ್ಳಿಗಳಿಗೆ ಈ ಡ್ಯಾಮ್ನಿಂದಲೇ ನೀರು ದೊರಕುವಂತೆ ಮಾಡಿದ್ದು, ಪಕ್ಕದ ಬಾಂಗ್ಲಾ ದೇಶದ ಜೊತೆ "ಗಂಗಾ ನದಿ ನೀರಿನ ಹಂಚಿಕೆ" ವಿವಾದವನ್ನು ಬಗೆಹರಿಸಿದ್ದು ಪಡಿತರ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಅವ್ಯವಹಾರ ಮತ್ತು ಕೊರತೆ ನೀಗಿಸಲು 'ಗ್ರೀನ್ ಕಾರ್ಡ್' ಯೋಜನೆ ಜಾರಿಗೆ ತಂದಿದ್ದ, ಕಪ್ಪು ಹಣವನ್ನು ತಡೆಯಲು ಹೊಸ ಕ್ರಮಗಳನ್ನು ಕೈಗೊಂಡು ಆ ಕಾಲದಲ್ಲೇ ಹತ್ತು ಸಾವಿರ ಕೋಟಿ ರೂ.ಗಳನ್ನು ದೇಶದ ಬೊಕ್ಕಸಕ್ಕೆ ಸೇರಿಸಿದ್ದರು.
ಜೊತೆಗೆ ಭಾರತ-ಪಾಕಿಸ್ತಾನದ ಗಡಿ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿಯೂ ದೇವೇಗೌಡರು ಮುಂದಾಗಿದ್ದರು. ಆದರೆ, ಕಾಂಗ್ರೆಸ್ ಚಿಂತಕರ ಚಾವಡಿ ಮಾತ್ರ ಈ ಬೆಳವಣಿಗೆಯನ್ನು ಸಹಿಸಲಿಲ್ಲ. ದೇವೇಗೌಡರು ಅಧಿಕಾರದಲ್ಲಿ ಹೀಗೆ ಮುಂದುವರೆದರೆ ದೇಶದಲ್ಲಿ ಮತ್ತೆ ಕಾಂಗ್ರೆಸ್ಸ್ ನೇತೃತ್ವದ ಸರ್ಕಾರ ಬರುವುದು ಅಸಾಧ್ಯವೆಂದು ಅರಿತು ದೇವೇಗೌಡರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಿತು.
ರಾಜ್ಯದ ಬಗ್ಗೆಯೂ ಹೆಚ್ಚು ಕಾಳಜಿ : ದೇವೇಗೌಡರಿಗೆ ತಮ್ಮ ನಾಡಿನ ಬಗ್ಗೆ ಅಪಾರ ಕಾಳಜಿ ಇರೋದನ್ನು ಯಾರು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಪ್ರಧಾನಿಯಾಗಿ ಸಂಸತ್ತಿನಲ್ಲಿ ಬಹುಮತವನ್ನು ಸಾಬಿತುಪಡಿಸಿದ ಕೆಲವೇ ದಿನಗಳಲ್ಲಿ ಆಲಮಟ್ಟಿ ಡ್ಯಾಮ್‌ನ ಎತ್ತರವನ್ನು 524 ಮೀಟರ್ಗಳಿಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದ್ದರು.
ಆದರೆ, ಇದಕ್ಕೆ ಅಂದಿನ ಮೈತ್ರಿಕೂಟ ಸರ್ಕಾರದ ಭಾಗವಾಗಿದ್ದ ಚಂದ್ರಬಾಬು ನಾಯ್ಡು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ದೇವೇಗೌಡರು ಮಣಿಯಲಿಲ್ಲ ಹಾಗೂ ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ ಗಾಡ್ಗಿಲ್ ಫಾರ್ಮುಲವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದಲೂ ಸಾವಿರಾರು ಕೋಟಿ ರೂ. ದೊರಕುವಂತೆ ಮಾಡಿದ್ದರು.
ಬೆಂಗಳೂರಿಗೆ ಕುಡಿಯುವ ಕಾರಣಕ್ಕಾಗಿ 9 ಟಿಎಂಸಿ ನೀರು ಕಾವೇರಿಯಿಂದ ದೊರಕುವಂತೆ ಮಾಡಿದ್ದರಿಂದ ಇಂದು ಬೆಂಗಳೂರಿನ ಜನ ನೀರಿಗಾಗಿ ಪರದಾಡುವ ಸ್ಥಿತಿ ಉದ್ಬವವಾಗಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ರಾಜ್ಯಕ್ಕೊಂದು ಪ್ರತ್ಯೇಕ ರೈಲ್ವೆ ವಲಯ, ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣ ಮಂಜೂರುಗೊಂಡಿದ್ದು, ನಷ್ಟದಲ್ಲಿದ್ದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಬೀಗ ಮುದ್ರೆ ಸಾವಿರಾರು ಕಾರ್ಮಿಕರು ಬೀದಿಪಾಲಾಗುವುದನ್ನು ತಪ್ಪಿಸಲು 600 ಕೋಟಿ ರೂ. ಕೇಂದ್ರ ಸರ್ಕಾರದಿಂದಲೇ ಒದಗಿಸಿದ್ದರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಗ್ರೀವಾಜ್ಞೆ ತಂದು ದಿಟ್ಟ ನಿಲುವು ಪ್ರದರ್ಶನ ಮಾಡಿದ್ದ ಬಂಗಾರಪ್ಪ ಸರ್ಕಾರವನ್ನು ವಜಾ ಮಾಡಬೇಕೆಂದು ಲೋಕಸಭೆಯಲ್ಲಿ ಅನ್ಯ ರಾಜ್ಯಗಳ ಸಂಸದರು ಮುಗಿಬಿದ್ದಾಗ ರಾಜ್ಯದ ಇತರ ಎಲ್ಲಾ ಸಂಸದರು ಉತ್ತರವಿಲ್ಲದೆ ಮೌನದಿಂದ ತಲೆತಗ್ಗಿಸಿ ಕುಳಿತರೆ, ದೇವೇಗೌಡರು ಮಾತ್ರ ಸತತ ಒಂದೂವರೆ ಗಂಟೆ ಸಂಸತ್ತಿನಲ್ಲಿ ರಾಜ್ಯ ಎದುರಿಸುತ್ತಿರುವ ನೀರಿನ ವಾಸ್ತವಿಕ ಸಮಸ್ಯೆ ಹಾಗೂ ತಮಿಳುನಾಡಿನ ಅನ್ಯಾಯವನ್ನು ಸದನಕ್ಕೆ ಎಳೆ ಎಳೆಯಾಗಿ ತೆರೆದಿಟ್ಟರು.
ಇದರಿಂದಾಗಿ ಪ್ರತಿಪಕ್ಷಗಳು ಸತ್ಯದ ಅರಿವಾಗಿ ತಮ್ಮ ಧರಣಿಯನ್ನು ಕೈ ಬಿಟ್ಟವು ಬಂಗಾರಪ್ಪ ಸರ್ಕಾರ ವಜಾಗೊಂಡು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವುದು ಆ ಮೂಲಕ ತಪ್ಪಿತ್ತು. ದೇವೇಗೌಡರು ಮುಖ್ಯ ಮಂತ್ರಿಯಾಗಿದ್ದಾಗ ಕೃಷ್ಣ ಜಲ ಭಾಗ್ಯ ನಿಗಮವನ್ನು ಸ್ಥಾಪಿಸಿ ಅಸಾಧ್ಯವನ್ನು ಸಾಧ್ಯ ಮಾಡಿ ಉತ್ತರ ಕರ್ನಾಟಕದ ರೈತರ ಹದಿನೈದು ಲಕ್ಷ ಎಕರೆ ಭೂಮಿಗೆ ಕೃಷ್ಣೆ ಹರಿಯುವಂತೆ ಮಾಡಿದ್ದರು.
ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕಾರಣ ಮಾಡದ ಗೌಡರು: ದೇವೇಗೌಡರು ನೆಲ,ಜಲ,ಭಾಷೆಯ ವಿಚಾರದಲ್ಲಿ ಎಂದೂ ರಾಜಕಾರಣ ಮಾಡಲಿಲ್ಲ. ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ರಾಜ್ಯದ ವಿರುದ್ಧ ಬಂದಾಗ ಅತ್ಯಂತ ಹೆಚ್ಚು ದ್ವೇಷಿಸುತ್ತಿದ್ದ ಸಿದ್ದರಾಮಯ್ಯನವರ ಸರ್ಕಾರವನ್ನು ಕೆಡವಲು ಸೂಕ್ತ ಸಂದರ್ಭ ಸೃಷ್ಟಿಯಾಗಿತ್ತು. ಆದರೆ, ದೇವೇಗೌಡರು ಈ ಸಮಯದಲ್ಲಿ ರಾಜಕಾರಣ ಮಾಡಬಾರದು ಎಂದು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತರು.
ಅಲ್ಲದೆ ನಾಡಿನ ಮುಖ್ಯಮಂತ್ರಿಗಿಂತ ಹೆಚ್ಚಿನ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರು. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದದ ಹೋರಾಟದಲ್ಲಿ ವಿಧಾಸೌಧದ ಮುಂದೆಯೇ ತಮ್ಮ ಇಳಿ ವಯಸ್ಸಿನಲ್ಲೂ ಉಪವಾಸ ಕೂತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿಯೂ ದೇವೇಗೌಡರು ಯಶಸ್ವಿಯಾದರು. ಸದಾ ರೈತರ ಏಳಿಗೆ ಬಗ್ಗೆ ಆಲೋಚನೆ ಮಾಡುವ ದೇವೇಗೌಡರು, ಈಗಲೂ ಕೆಲಸದಲ್ಲಿ ಅತ್ಯುತ್ಸಾಹ ತೋರಿಸುತ್ತಾರೆ.