ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳುತ್ತಿದ್ದು, ಇದಕ್ಕೂ ಮೊದಲೇ ಬಿಎಸ್‌ವೈ ಪುತ್ರ ಬಿ ವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿ ವಾಪಾಸ್ಸಾಗಿರುವುದು ಕುತೂಹಲ ಮೂಡಿಸಿದೆ. ಇಂದು ಮಧ್ಯಾಹ್ನ 2:55ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳಲಿದ್ದಾರೆ.
ಸಂಜೆ 5.30ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ. ಸಂಜೆ ಕೆಲ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು, ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ನಡೆಸುತ್ತಿರುವ ಹಿನ್ನೆಲೆ ವಾಪಸ್ ಬರುವಿಕೆಯ ಸಮಯವನ್ನು ಕಾಯ್ದಿರಿಸಿಕೊಂಡಿದ್ದಾರೆ.
ಓದಿ: 2 ದಿನದಲ್ಲಿ ಕೇಂದ್ರ ನಾಯಕರನ್ನ ಸಂಪರ್ಕಿಸಿ ಸಂಪುಟ ವಿಸ್ತರಣೆ ಅಂತಿಮಗೊಳಿಸುವೆ : ಬೊಮ್ಮಾಯಿ
ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಅಂತಿಮ ಹಂತದಲ್ಲಿದೆ. ಯಾವಾಗ ಸರ್ಜರಿ ನಡೆಸಬೇಕು ಎನ್ನುವ ಕುರಿತು ಹೈಕಮಾಂಡ್ ನಾಯಕರ ಜೊತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ. ಹಾಗಾಗಿ, ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಕನಸು ಚಿಗುರೊಡೆದಿದೆ. ಇನ್ನೊಂದೆಡೆ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್ ನಾಯಕರ ಜೊತೆ ಸಿಎಂ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿಕೊಡಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆ ಆದಷ್ಟು ಬೇಗ ಹೆಸರು ಪ್ರಕಟಿಸಲು ಸಿಎಂ ಮನವಿ ಮಾಡಲಿದ್ದಾರೆ. ಇನ್ನು ಸಿಎಂ ಪ್ರವಾಸಕ್ಕೂ ಮೊದಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿ ನಿನ್ನೆ ಸಂಜೆ ವಾಪಸ್ಸಾಗಿದ್ದಾರೆ.
ಕೋರ್ ಕಮಿಟಿ ಕಳಿಸಿರುವ ಪಟ್ಟಿಯಲ್ಲಿ ಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಹೆಸರು ಇರುವುದು ಮತ್ತು ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರುವ ಹಿನ್ನೆಲೆ ವಿಜಯೇಂದ್ರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.