ಬೆಂಗಳೂರು: ಟಿಕ್ಟಾಕ್ನಲ್ಲಿ ಪರಿಚಯವಾದ ಸುಂದರ ಯುವತಿಯೊಬ್ಬಳು ಉದ್ಯಮಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಪೀಕಿರುವ ಘಟನೆ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ.
ವಿಜಯಲಕ್ಷ್ಮಿ ಎಂಬ (ಟಿಕ್ಟಾಕ್ ಸ್ಟಾರ್ ) ಮಹಿಳೆಯ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಿವಕುಮಾರ್ ಎಂಬುವರು ಡಿ.ಜಿ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಿಕ್ಟಾಕ್ನಲ್ಲಿ ಕಲರ್ ಕಲರ್ ಆಗಿ ಸಿನಿಮಾ ಗೀತೆಗಳಿಗೆ ಆ್ಯಕ್ಟ್ ಮಾಡುತ್ತಿದ್ದ ವಿಜಯಲಕ್ಷ್ಮಿಯನ್ನು ಕಂಡು ಬೆರಗಾದ ಶಿವಕುಮಾರ್, ಆಕೆಯನ್ನು ಪರಿಚಯಿಸಿಕೊಂಡು ನಂತರ ಫೇಸ್ಬುಕ್ನಲ್ಲಿ ಚಾಟ್ ಮಾಡುತ್ತಿದ್ದರು. ನಂತರ ಈ ಪರಿಚಯ ಕ್ರಮೇಣ ಪ್ರೇಮಕ್ಕೆ ತಿರುಗಿದೆ. ಅಲ್ಲದೇ ಕೆಲದಿನಗಳು ಇಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರಂತೆ. ಅಲ್ಲದೇ ಉದ್ಯಮಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಯುವತಿ ಲಕ್ಷಾಂತರ ರೂ. ಹಣ ಪಡೆದಿದ್ದಾಳಂತೆ..
ಆದರೆ ಮತ್ತೆ ಮತ್ತೆ ವಿಜಯಲಕ್ಷ್ಮಿಯಿಂದ ಹಣದ ಬೇಡಿಕೆ ಹೆಚ್ಚಾದಾಗ ಶಿವಕುಮಾರ್ ನನ್ನನ್ನ ಮದುವೆ ಮಾಡಿಕೋ ಎಂದು ಕೇಳಿದರಂತೆ ಆದರೆ ಇದಕ್ಕೆ ನಿರಾಕರಿಸಿದ, ವಿಜಯಲಕ್ಷ್ಮಿ, ಆತನಿಂದ ದೂರ ಉಳಿದಿದ್ದಳು. ಅಲ್ಲದೇ ಹಣಕ್ಕಾಗಿ ಬೆದರಿಸಲು ಶುರು ಮಾಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಸ್ನೇಹಿತ ಮಧು ಮೂಲಕ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಧಮಕಿ ಹಾಕಿದ್ದಾಳೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಯುವತಿ ಕಿರುಕುಳಕ್ಕೆ ಬೇಸತ್ತ ಶಿವಕುಮಾರ್ ಈಗ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಟಿಕ್ಟಾಕ್ ಬಳಕೆದಾರರು ಈ ಆ್ಯಪ್ನಲ್ಲಿ ಕಲರ್ ಕಲರ್ ಕಲೆ ನೋಡಿ ಸ್ನೇಹ ಮಾಡುವ ಮುನ್ನ ಯೋಚಿಸಿ ನಿರ್ಧಾರ ಕೈಗೊಳ್ಳುವುದೊಳಿತು.