ಬೆಂಗಳೂರು: ಕದ್ದ ಮೊಬೈಲ್ಗಳನ್ನು ಮಾರಾಟ ಮಾಡುತ್ತಿದ್ದ ದಂಧೆಕೋರರ ಮೇಲೆ ದಾಳಿ ನಡೆಸಿದ ಕಲಾಸಿಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಾಜು, ನಿಸಾಮುದ್ಧಿನ್ ಹಾಗೂ ಮೊಹಮ್ಮದ್ ರಫೀಕ್ ಬಂಧಿತ ಆರೋಪಿಗಳು.
ಆರೋಪಿಗಳು ಅನಂತಪುರ, ತಿರುವಂನಂತಪುರ ಹಾಗೂ ತೆಲಂಗಾಣದಿಂದ ಬೆಂಗಳೂರಿಗೆ ಬಂದು ತಮ್ಮದೇ ನೆಟ್ವರ್ಕ್ ಮೂಲಕ ಕದ್ದ ಮೊಬೈಲ್ ಡೀಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ರಸ್ತೆ ಬದಿ ಕದ್ದ ಮೊಬೈಲ್ಗಳ ಮಾರಾಟ:
ರಾಜಧಾನಿಯ ಮೆಜೆಸ್ಟಿಕ್, ಕಾಟನ್ ಪೇಟೆ ಹಾಗೂ ಕೆ.ಆರ್ ಮಾರ್ಕೆಟ್ ಸೇರಿ ವಿವಿಧ ಪ್ರಮುಖ ಕಡೆಗಳಲ್ಲಿ ಹಾಗೂ ಬಸ್ಗಳಲ್ಲಿ ಮೊಬೈಲ್ ಕಳ್ಳತನ ನಿತ್ಯ ನಡೆಯುತ್ತಲೇ ಇತ್ತು. ಆದರೆ ಇದಕ್ಕೆ ಸೂಕ್ತ ಕಾನೂನಿಲ್ಲ, ಹೀಗಾಗಿ ಮೊಬೈಲ್ ಕಳ್ಳತನ ಹೆಚ್ಚಾಗುತ್ತಿತ್ತು. ಮೊಬೈಲ್ ಕಳೆದುಕೊಂಡವರಿಗೆ ತಮ್ಮ ಮೊಬೈಲ್ ಮತ್ತೆ ಸಿಗುವ ಚಾನ್ಸ್ ಇರಲಿಲ್ಲ. ಹೀಗೆ ಕಳ್ಳರ ಪಾಲಾಗುತಿದ್ದ ಮೊಬೈಲ್, ಸದ್ದಿಲ್ಲದೇ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಮಾರಾಟವಾಗುತ್ತಿದ್ದವು.
ತರಕಾರಿ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುವ ರೀತಿ, ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ವಿವಿಧ ಬಗೆಯ ಮೊಬೈಲ್ಗಳನ್ನು ಇಟ್ಟುಕೊಂಡು ಅತಿ ಕಡಿಮೆ ಬೆಲೆಗೆ ಕದ್ದ ಮೊಬೈಲ್ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಲಾಸಿ ಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತಿದೆ. ಕದ್ದ ಮೊಬೈಲ್ ಡೀಲಿಂಗ್, ಭೂಗತವಾದ ನೆಟ್ವರ್ಕ್ ಮೂಲಕ ಆಪರೇಟ್ ಆಗುತ್ತಿದ್ದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸದ್ಯ ಬಂಧಿತರಿಂದ 28 ರೂ ಲಕ್ಷ ರೂ. ಮೌಲ್ಯದ 250 ಮೊಬೈಲ್ ಫೋನ್ ಹಾಗೂ ಕಾರನ್ನು ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.