ಬೆಂಗಳೂರು: ಜ್ಯೋತಿಷಿ ಪ್ರಮೋದ್ ಎಂಬವರ ಕೈಕಾಲು ಕಟ್ಟಿ ದರೋಡೆ ಮಾಡಿದ ಪ್ರಕರಣ ಸಂಬಂಧ ಮಹಿಳೆ ಸೇರಿ ಆರು ಜನರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆಪ್ತ ಸಹಾಯಕಿ ಮೇಘನಾ ಮತ್ತು ಸುಪಾರಿ ಪಡೆದಿದ್ದ ರಾಜ ಮತ್ತು ರಿಚರ್ಡ್ ಸೇರಿ ಆರು ಜನ ಬಂಧಿತರಾಗಿದ್ದಾರೆ. ಆರೋಪಿಗಳಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ, 64 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.
ಬಂಧಿತರೆಲ್ಲರೂ ಆಡುಗೋಡಿಯ ವಿನಾಯಕ ನಗರದವರಾಗಿದ್ದಾರೆ.
ನಾಲ್ಕೈದು ತಿಂಗಳ ಹಿಂದೆ ಜ್ಯೋತಿಷ್ಯ ಕೇಳಲು ಪ್ರಮೋದ್ ಬಳಿ ಆರೋಪಿತೆ ಮೇಘನಾ ಬಂದಿದ್ದಳು. ಕಾಲಕ್ರಮೇಣ ಆತ್ಮೀಯತೆ ಬೆಳೆಸಿಕೊಂಡು ನಂತರ ಹಣದ ಸಹಾಯ ಮಾಡುವಂತೆ ಕೇಳಿದ್ದಳು. ಸದ್ಯ ಹಣವಿಲ್ಲ ಎಂದು ಪ್ರಮೋದ್ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಮೇಘನಾ ತನ್ನ ಏರಿಯಾದ ಯುವಕರನ್ನು ಒಗ್ಗೂಡಿಸಿ ದರೋಡೆಗೆ ಸಂಚು ರೂಪಿಸಿದ್ದಳು. ಜುಲೈ 9 ರಂದು ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಜ್ಯೋತಿಷಿ ಪ್ರಮೋದ್ ಅವರ ಮನೆಗೆ ಏಕಾಏಕಿ ನುಗ್ಗಿದ್ದ ಆರೋಪಿಗಳು ಅವರ ಕೈ ಕಾಲು ಕಟ್ಟಿ ಹಾಕಿ 400 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕೆಂಗೇರಿ ಪೊಲೀಸರು, ಇದೀಗ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದು ಹಾಡಹಗಲೇ ದರೋಡೆ
ಮೇಘನಾ ಜ್ಯೋತಿಷಿ ಜೊತೆಯಲ್ಲಿರುವಾಗಲೇ ಆರೋಪಿಗಳು ಏಕಾಏಕಿ ನುಗ್ಗಿ ಮೇಘನಾಳ ಕೈಕಾಲು ಕಟ್ಟಿ ಜ್ಯೋತಿಷಿ ಪ್ರಮೋದ್ ಥಳಿಸಿದ್ದರು. ಹಲ್ಲೆ ಮಾಡಿ ಮನೆಯಲ್ಲಿದ್ದ 400 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ದೋಚಿದ್ದರು. ಬಳಿಕ ನಗರದ ಮನೆಯೊಂದರಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದರು. ಪೊಲೀಸರು ಮುಂದೆಯೂ ಏನೂ ಗೊತ್ತಿಲ್ಲದಂತೆ ಮೇಘನಾ ನಟಿಸಿದ್ದಳು. ಬಳಿಕ ಮೇಘನಾ ಮತ್ತು ಆಕೆ ಟೀಂ ಪರಾರಿಯಾಗಿತ್ತು ಎಂದು ಪಶ್ಚಿಮ ವಿಭಾಗದ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.