ಬೆಂಗಳೂರು : ಸಮಾಜದಲ್ಲಿ ಆಗುತ್ತಿರುವ ಈಗಿನ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರಸ್ತುತ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಓಲೈಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಓಲೈಕೆ ರಾಜಕಾರಣಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಜನರು ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿಚಾರದಲ್ಲಿ ತಮ್ಮದೇ ಆದ ನಿಲುವನ್ನು ತೆಗೆದುಕೊಂಡಿದ್ದಾರೆ. ಬಿಜೆಪಿ ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ಕಣ್ಮರೆಯಾಗುತ್ತಿದೆ. ಸುಳ್ಳಿನ ಸರದಾರರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಶೀತಲ ಸಮರದಿಂದ ಕಾಂಗ್ರೆಸ್ ಪಕ್ಷ ನೆಲಕಚ್ಚಲಿದೆ. ಕುಟುಂಬ ರಾಜಕಾರಣವನ್ನೇ ನೆಚ್ಚಿರುವ ಹಾಗೂ ಕೆಲವೇ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಜೆಡಿಎಸ್ ಕೂಡ ರಾಜ್ಯದಲ್ಲಿ ನಿರ್ನಾಮವಾಗಲಿದೆ. ಇದೇ ಆತಂಕದಿಂದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಟೀಕೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹಿಜಾಬ್, ಹಲಾಲ್ ಕಟ್, ಮಸೀದಿಯ ಮೇಲಿನ ಧ್ವನಿವರ್ಧಕ ಕುರಿತಂತೆ ಸ್ಪಷ್ಟ ನಿಲುವನ್ನೇ ಹೊಂದಿಲ್ಲ. ಕೇವಲ ಓಲೈಕೆ ರಾಜಕಾರಣದಲ್ಲಿ ಅವರು ನಿರತರಾಗಿರುವ ಬದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಪಂಚರಾಜ್ಯ ಚುನಾವಣೆಯ ಫಲಿತಾಂಶದ ಮಾದರಿಯಲ್ಲಿ ಕರ್ನಾಟಕದಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಲಿದೆ. ಇದೇ ಆತಂಕದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ತುಷ್ಟೀಕರಣ, ಧಾರ್ಮಿಕ ಅಶಾಂತಿ ಮೂಡಿಸುವ ಮತ್ತು ಸಮಾಜವನ್ನು ಒಡೆಯುವ ರಾಜಕೀಯ ಮುಂದುವರೆಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಇಂದು ಸಿಎಂ ದೆಹಲಿ ಪ್ರವಾಸ : ನೀರಾವರಿ ಯೋಜನೆಗಳ ಚರ್ಚೆ, ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?