ಬೆಂಗಳೂರು: ಮುಖ್ಯಮಂತ್ರಿಯಾಗಿ ಮುಂದಿನ ಎರಡೂವರೆ ವರ್ಷ ತಾವೇ ಇರುವುದಾಗಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಒಂದಿಷ್ಟು ಗೊಂದಲವಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಬಿಜೆಪಿ ಪಕ್ಷದ ಆಂತರಿಕ ಸಮಸ್ಯೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ವತಃ ಮುಖ್ಯಮಂತ್ರಿಗಳೇ ಇಂತಹ ಹೇಳಿಕೆ ನೀಡಿರುವುದರಿಂದ ಯಾವುದೇ ಒತ್ತಡ ಇರಬಹುದು ಎನ್ನುವ ಅನುಮಾನ ಕಾಡುತ್ತಿದೆ. ತಾವೇ ಇಂತಹ ಹೇಳಿಕೆ ನೀಡಿರುವುದು ಅವರು ದುರ್ಬಲರಾಗಿದ್ದಾರೆ ಎನ್ನುವ ಅನುಮಾನವನ್ನು ಮೂಡಿಸುತ್ತಿದೆ ಎಂದರು.
ಪ್ರತಿಪಕ್ಷವಾಗಿ ನಾವು ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ್ದೇವೆ. ಸರ್ಕಾರದ ನ್ಯೂನತೆಯನ್ನು ಎತ್ತಿ ತೋರಿಸಿದ್ದೇವೆ. ಅವರು ತಮ್ಮ ಸ್ಥಾನದ ಬಗ್ಗೆ ಅಷ್ಟೊಂದು ವಿಶ್ವಾಸ ಹೊಂದಿದ್ದರೆ ಇಂತಹ ಹೇಳಿಕೆ ಕೊಡುವ ಅಗತ್ಯ ಏನಿತ್ತು? ಮುಖ್ಯಮಂತ್ರಿ ಬದಲಾವಣೆ ಕುರಿತ ಸಾಧ್ಯತೆಗಳು ಹಾಗೂ ಇರುವ ಸಮಸ್ಯೆಗಳ ಕುರಿತು ನಾನು ಚರ್ಚಿಸಲು ಹೋಗುವುದಿಲ್ಲ. ಆದರೆ ಜನರಿಗೆ ತಾವು ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ತಿಳಿಸಲು ಮುಂದಾಗಿರುವ ಪ್ರಯತ್ನದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ ಎಂದಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ ಬಿಜೆಪಿ ಅಥವಾ ಶಾಸಕಾಂಗ ಸದಸ್ಯರ ದನಿಯಾಗಿ ಗೋಚರಿಸುತ್ತಿಲ್ಲ. ಸಂಪುಟದ ಕೆಲ ಸದಸ್ಯರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅವರ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ ಎಂದರು. ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ನೀಡಿರುವ ಹಿಂದಿರುವ ಉದ್ದೇಶಗಳ ಕುರಿತು ಪ್ರಸ್ತಾಪಿಸಿದ ಪ್ರಶ್ನೆಗೆ ಡಿಕೆಶಿ ಉತ್ತರಿಸಲು ನಿರಾಕರಿಸಿದರು.
ಓದಿ-ಸಾಂಪ್ರದಾಯಿಕ ಬೆಳೆ ಬೆಳೆದು ಕೈ ಸುಟ್ಟುಕೊಂಡ ರೈತರ ಕೈ ಹಿಡಿದ ಔಷಧಿ ಸಸ್ಯಗಳು
ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಶೇಕಡಾ 50ರಷ್ಟು ಗ್ರಾಮ ಪಂಚಾಯಿತಿ ಗೆದ್ದುಕೊಂಡಿದೆ. ಇದರ ಬಗ್ಗೆ ನಮ್ಮ ಬಳಿ ದಾಖಲೆಗಳು ಇವೆ. ನಾನು ಜನವರಿ 5ರಿಂದ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ಎಲ್ಲಾ ಕಡೆ ಸಭೆ ನಡೆಸಿ ಮುಖಂಡರ ಜೊತೆ ಚರ್ಚಿಸುತ್ತೇನೆ. ಈ ಭೇಟಿ ಹಾಗೂ ಚರ್ಚೆಯ ನಂತರವೇ ನಾವು ಗೆದ್ದಿರುವ ಸ್ಥಾನಗಳ ಕುರಿತು ಅಧಿಕೃತ ಮಾಹಿತಿ ನೀಡುತ್ತೇನೆ ಎಂದರು.
ಚುನಾವಣಾ ಆಯೋಗ ಇದನ್ನು ಪಕ್ಷದ ಗೆಲುವು ಎನ್ನುವ ರೀತಿ ಪ್ರಕಟಿಸಬಾರದು ಎಂದಿದೆ. ಆದರೆ ನಾನು ಬ್ಲಾಕ್ ಕಾಂಗ್ರೆಸ್ ನಾಯಕರಿಂದ ಗೆದ್ದಿರುವ ಅಭ್ಯರ್ಥಿಗಳ ದೂರವಾಣಿ ಸಂಖ್ಯೆ, ಭಾವಚಿತ್ರ ಹಾಗೂ ಹೆಸರುಗಳ ಸಮೇತವಾಗಿ ಮಾಹಿತಿ ಒದಗಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಮಾಹಿತಿ ನೀಡಿದ್ದು, ವಿವರ ಒದಗಿಸುವಂತೆ ಸೂಚಿಸಿದ್ದೇನೆ ಎಂದರು.
ರಾಜಣ್ಣ ಶುಭಾಶಯ
ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ, ಹೊಸ ವರ್ಷದ ಶುಭಾಶಯ ಕೋರಿದರು.