ಬೆಂಗಳೂರು: ಮದ್ಯ ಸೇವನೆಗಾಗಿ ಹಣ ಸಂಗ್ರಹಿಸಲು ರಾತ್ರೋರಾತ್ರಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಮಾಡಿ ನಗದು ದೋಚುತ್ತಿದ್ದ ವ್ಯಕ್ತಿಯನ್ನು ಸುಬ್ರಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಎಂಬಾತ ಬಂಧಿತ ಆರೋಪಿ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಆರೋಪಿಗಳು ಹೊಟೇಲ್ಗಳು, ವಿವಿಧ ಮಳಿಗೆಗಳ ಬೀಗ ಹೊಡೆದು ಒಳನುಗ್ಗಿ ಕ್ಷಣಾರ್ಧದಲ್ಲಿ ಅಲ್ಲಿದ್ದ ಹಣ ಎಗರಿಸುತ್ತಿದ್ದರು. ಕಾರ್ತಿಕ್ ಜೊತೆಗೆ ಮತ್ತೊಬ್ಬ ಆರೋಪಿ ಕುಡಿತದ ಚಟಕ್ಕೆ ಬಿದ್ದಿದ್ದ. ಇಬ್ಬರೂ ಸುಲಭವಾಗಿ ಹಣ ಮಾಡುವ ಗೀಳಿಗೆ ಬಿದ್ದಿದ್ದರು. ಕಳ್ಳತನದ ಹಣದಲ್ಲಿ ಮದ್ಯ ಭರಪೂರ ಸೇವಿಸುತ್ತಿದ್ದರು. ಬೈಕ್ ಕದ್ದು ಅದೇ ಬೈಕ್ನಲ್ಲಿ ಸಂಚರಿಸಿ ಅಂಗಡಿಗಳಿಗೆ ನುಗ್ಗಿ ಹಣ, ಬೆಳ್ಳಿಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದರು.
ಇದೇ ರೀತಿ ಕೋಣನಕುಂಟೆ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ. ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಾಗಿಗುಡ್ಡದಲ್ಲಿರುವ ನೈವೇದ್ಯಂ ಹೋಟೆಲ್ನಲ್ಲಿ 8 ರಂದು ಮಧ್ಯರಾತ್ರಿ 2.30ರ ಸುಮಾರಿಗೆ ಕಳ್ಳತನ ಮಾಡಿದ್ದಾರೆ. ಅಂದೇ ಮೂರು ಕಡೆಯಿಂದ ಒಟ್ಟು ಎರಡೂವರೆ ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಕೈಗೊಂಡ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಕೈಗೆ ಕಾರ್ತಿಕ್ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಆಂಧ್ರ ಸಿಎಂ ಫೋಟೊ ದುರ್ಬಳಕೆ ಮಾಡಿ ಗಾಂಜಾ ಮಾರಾಟ: ಮೂವರ ಬಂಧನ
ವಿಚಾರಣೆ ವೇಳೆ ಕಾರ್ತಿಕ್ ಕುಡಿತಕ್ಕಾಗಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ 20 ಸಾವಿರ ರೂ., 100 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.