ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಕೊಲೆಯೊಂದಕ್ಕೆ ಸಂಚು ಹಾಕಿದ್ದ ವಿಚಾರವನ್ನು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಮನೆಗಳ್ಳತನ ಪ್ರಕರಣವೊಂದರಲ್ಲಿ ಕೊತ್ತನೂರು ಠಾಣಾ ಪೊಲೀಸರಿಂದ ಬಂಧಿತರಾಗಿದ್ದ ನಾಲ್ವರು ಆರೋಪಿಗಳಾದ ಶರತ್ ಕುಮಾರ್, ಸುನಿಲ್ ಕುಮಾರ್, ಅರವಿಂದ್ ಹಾಗೂ ಪ್ರಕಾಶ್ ರಾಜ್ ಪೈಕಿ ಸುನಿಲ್ ಕುಮಾರ್ ಎಂಬಾತ ವಿವೇಕನಗರದ ನಿವಾಸಿಯಾಗಿದ್ದ ಮೂವೇಶ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ವಿವೇಕನಗರ ವ್ಯಾಪ್ತಿಯ ರೌಡೀಶೀಟರ್ ಆಗಿದ್ದ ಸುನಿಲ್ ಕುಮಾರ್ ಹಾಗೂ ಮೂವೇಶ್ ಎಂಬಾತನ ನಡುವೆ ಏರಿಯಾದಲ್ಲಿ ಪ್ರಾಬಲ್ಯ ಹೊಂದುವ ವಿಚಾರದಲ್ಲಿ ವೈಮನಸ್ಸಿತ್ತು. ವಿವೇಕನಗರ ಏರಿಯಾದವರಾಗಿದ್ದ ಮೂವೇಶ್ ಹಾಗೂ ಸುನಿಲ್ ಕುಮಾರ್, ಏರಿಯಾದಲ್ಲಿ ಪ್ರಭಾವ ಬೀರುವ ವಿಚಾರದಲ್ಲಿ ವೈರತ್ವ ಹೊಂದಿದ್ದರು. ಹೀಗಾಗಿ ಮೂವೇಶ್ ಹತ್ಯೆಗೆ ಸಂಚು ರೂಪಿಸಿ ಮನೆಯಲ್ಲಿ ಮಾರಕಾಸ್ತ್ರ ಸಂಗ್ರಹಿಸಿಟ್ಟಿದ್ದ ಸುನಿಲ್ ಇದರ ನಡುವೆ ಕಳ್ಳತನ ಪ್ರಕರಣವೊಂದರಲ್ಲಿ ಕೊತ್ತನೂರು ಪೊಲೀಸರಿಂದ ಬಂಧಿತನಾಗಿದ್ದ.
ಪೊಲೀಸರ ವಿಚಾರಣೆ ವೇಳೆ ಏರಿಯಾದಲ್ಲಿ ಕೊಲೆಗೆ ಸಂಚು ರೂಪಿಸಿದ್ದ ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಎಸ್. ಗುಳೇದ ತಿಳಿಸಿದ್ದಾರೆ.