ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೂರು ದಿನ ಪೂರ್ಣಗೊಳಿಸಿದೆ. ನೆರೆ ಹಾನಿ ಸೇರಿ ಸಾಲು ಸಾಲು ಸವಾಲುಗಳು, ಸಂಕಷ್ಟಗಳನ್ನು ಎದುರಿಸಿದೆ.
ಜುಲೈ 26ರಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಿ, ನೇಕಾರರ 100 ಕೋಟಿ ಸಾಲಮನ್ನಾ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡು ತಿಂಗಳಲ್ಲಿ ಎರಡು ಸಾವಿರ ರೂ. ಕೊಡುವ ಘೋಷಣೆ ಮಾಡಿದರು.
ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಮೊದಲ ಅಗ್ನಿ ಪರೀಕ್ಷೆ ಎನ್ನುವಂತೆ ಆಗಸ್ಟ್ 6ರಂದು ಉತ್ತರ ಕರ್ನಾಟಕ ನೆರೆಯಿಂದ ತತ್ತರಿಸಿತು. ಮಲೆನಾಡು, ಕರವಾವಳಿ, ಕೊಡಗು ಕೂಡ ನೆರೆಯಿಂದ ನಲುಗುವಂತಾಯಿತು. ಸಂಪುಟ ವಿಸ್ತರಣೆ ಚರ್ಚೆಗೆ ದೆಹಲಿಗೆ ಹೊರಟು ನಿಂತಿದ್ದ ಸಿಎಂ ಪ್ರವಾಸ ಬಿಟ್ಟು ನೆರೆ ಪೀಡಿತ ಪ್ರದೇಶಗಳ ವೈಮಾನಿಕ ವೀಕ್ಷಣೆ ನಡೆಸಿದರು. ನಂತರ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಂಪುಟ ಸದಸ್ಯರಿಲ್ಲದ ಕಾರಣ ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡು ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿದರು.
ನಿರ್ಮಲಾ ಸೀತಾರಾಮನ್, ಅಮಿತ್ ಶಾ ಹಾಗೂ ಕೇಂದ್ರದ ತಂಡ ಬಂದು ವೀಕ್ಷಣೆ ಮಾಡಿದರೂ, ಪರಿಹಾರ ಘೋಷಣೆ ಮಾಡದೇ ಇದ್ದದ್ದು ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಸವಾಲಾಯಿತು. ಆರ್ಥಿಕ ಹೊರೆಯ ನಡುವೆಯೂ ಸಂಪೂರ್ಣ ನೆಲಸಮ ಮತ್ತು ಭಾಗಶಃ ಶಿಥಿಲಗೊಂಡ ನಿವಾಸಗಳನ್ನು ಹೊಸದಾಗಿ ನಿರ್ಮಿಸಲು 5 ಲಕ್ಷ, ಮನೆಗಳ ದುರಸ್ತಿಗೆ 50 ಸಾವಿರ, ಅಂಗಡಿ ಮುಂಗಟ್ಟು ಹಾನಿಗೆ 50 ಸಾವಿರ, ಬೆಳೆ ಹಾನಿಗೆ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕಾಯಿತು.
ರಾಜ್ಯ ಸರ್ಕಾರದಿಂದ ನೆರೆ ಪರಿಹಾರ ಘೋಷಣೆ:
ನೆರೆ ಸಂಕಷ್ಟದ ನಡುವೆ ಆಗಸ್ಟ್ 20ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಯಿತು. 17 ಮಂದಿಯನ್ನು ಸೇರ್ಪಡೆ ಮಾಡಿಕೊಂಡು ಮೂವರಿಗೆ ಡಿಸಿಎಂ ಪಟ್ಟ ನೀಡಲಾಯಿತು. ಸಂಪುಟ ವಿಸ್ತರಣೆ ನಂತರ ಖಾತೆಗಳ ಹಂಚಿಕೆಗೆ ಆರು ದಿನ ತೆಗೆದುಕೊಳ್ಳಲಾಯಿತು. ಹೈಕಮಾಂಡ್ನೊಂದಿಗೆ ಮಾತುಕತೆ, ನಂತರ ಆಗಸ್ಟ್ 26ರಂದು ಖಾತೆಗಳ ಹಂಚಿಕೆ ಮಾಡಲಾಯಿತು. ಅದಾಗಿ 20 ದಿನಗಳ ಬಳಿಕ ಸೆಪ್ಟೆಂಬರ್ 16ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಯಿತು. ಅನರ್ಹ ಶಾಸಕರಿಗೆ ಕೊಡಬೇಕಾದ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದ ಸಿಎಂ, ಸೆ. 28ರಂದು 14 ಸಚಿವರಿಗೆ ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆ ಹಂಚಿಕೆ ಮಾಡಿದರು.
ಕೇಂದ್ರದಿಂದ ಮಧ್ಯಂತರ ನೆರೆ ಪರಿಹಾರ ಪ್ರಕಟ:
ಇಷ್ಟೆಲ್ಲಾ ಘಟನಾವಳಿಗಳ ನಡುವೆ ಕೇಂದ್ರ ನೆರವು ನೀಡುತ್ತಿಲ್ಲ, ಬೇರೆ ರಾಜ್ಯಕ್ಕೆ ಸ್ಪಂದಿಸಿದ ರೀತಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಸೇರಿ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಿಜೆಪಿ ವಿರೋಧಿ ಅಲೆ ಏಳುತ್ತಿದ್ದಂತೆ ಅಕ್ಟೋಬರ್ 4ರಂದು 1,200 ಕೋಟಿ ರೂ.ಗಳ ಮಧ್ಯಂತರ ಪರಿಹಾರ ಪ್ರಕಟಿಸಿತು. ಕೇಂದ್ರದ ಹಣಕ್ಕೆ ಕಾಯದೆ ರಾಜ್ಯದ ಬೊಕ್ಕಸದಿಂದಲೇ ಹಣ ಖರ್ಚು ಮಾಡುವ ಬಹುದೊಡ್ಡ ಸವಾಲನ್ನು ಯಡಿಯೂರಪ್ಪ ಸರ್ಕಾರ ಎದುರಿಸಬೇಕಾಯಿತು.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಮೀನುಗಾರರ, ನೇಕಾರರ ಸಾಲ ಮನ್ನಾ, ನೆರೆ ಪರಿಹಾರಕ್ಕೆ 2,949 ಕೋಟಿ ಬಿಡುಗಡೆ, ಮನೆ ನಿರ್ಮಾಣಕ್ಕೆ 5 ಲಕ್ಷ, ಮನೆ ದುರಸ್ತಿಗೆ 50 ಸಾವಿರ, ಅಂಗಡಿ ಹಾನಿಗೆ 50 ಸಾವಿರ, ಬೆಳೆ ಹಾನಿಗೆ ಹೆಕ್ಟೇರ್ ಗೆ 10 ಸಾವಿರ ರೂ. ಘೋಷಿಸಿದ್ದು, ತಕ್ಷಣದ ಪರಿಹಾರವಾಗಿ 10 ಸಾವಿರ ಹಣವನ್ನು ಬಿಡುಗಡೆ ಮಾಡಿದೆ. ಇನ್ನು ಕಲ್ಯಾಣ ಕರ್ನಾಟಕ ಘೋಷಣೆ, ಪ್ರತ್ಯೇಕ ಸಚಿವಾಲಯ ರಚನೆ, ಬೀದರ್ನಲ್ಲಿ 20 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ, ಕಿತ್ತೂರು ಅಭಿವೃದ್ಧಿಗೆ 200 ಕೋಟಿ ಕ್ರಿಯಾ ಯೋಜನೆ, ನೂತನ ಜವಳಿ ನೀತಿ ಪ್ರಕಟ, ಖಾಸಗಿ ಉದ್ಯಮಗಳಲ್ಲಿ ಆದ್ಯತೆ ಮೇರೆಗೆ ಕನ್ನಡಿಗರಿಗೆ ಉದ್ಯೋಗ ಕಡ್ಡಾಯಕ್ಕೆ ನಿರ್ಧಾರ, 5 ಜಿಲ್ಲೆಗಳ 49 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿ ಅಗತ್ಯ ನೆರವು ನೀಡಲು ಸೂಚನೆ ನೀಡಿದೆ.
ಇಷ್ಟಾದರೂ ರಾಜ್ಯದಲ್ಲಿ ಸಂಭವಿಸಿದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡದಿರುವುದು ರಾಜ್ಯದ ಜನರಿಗೆ ಹಾಗೂ ಪ್ರತಿಪಕ್ಷಗಳ ಟೀಕೆಯನ್ನು ಎದುರಿಸುವಂತಾಗಿದೆ. ಸಾಲ ಮನ್ನಾ ಹಾಗೂ ನೆರೆಯಿಂದಾಗಿ ಹೊಸ ಯೋಜನೆ ಘೋಷಣೆ ಸ್ಥಗಿತಗೊಳಿಸಿದ್ದು, ವಿವಿಧ ಯೋಜನೆಗಳ ಆರಂಭಕ್ಕೆ ಇದ್ದ ಹಣವನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಹಂಚಿಕೆ ಮಾಡಿದ್ದ ಅನುದಾವನ್ನು ಕಡಿತಗೊಳಿಸಿ, ಆ ಹಣವನ್ನು ನೆರೆ ಪರಿಹಾರಕ್ಕೆ, ಅನರ್ಹ ಶಾಸಕರ ಕ್ಷೇತ್ರಗಳಿಗೆ ನೀಡುತ್ತಿರುವುದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ವರ್ಗಾವಣೆ ವಿವಾದ:
ಬಿಜೆಪಿ ಸರ್ಕಾರ ಬಂದ ಆರಂಭದ ದಿನದಿಂದಲೂ ಐಎಎಸ್, ಐಪಿಎಸ್, ಕೆಎಎಸ್, ಐಎಫ್ಎಸ್, ಗೃಹ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಕಿರಿಯ ಮತ್ತು ಹಿರಿಯ ಅಧಿಕಾರಿಗಳ ವರ್ಗಾವಣೆ ಆಗಿದೆ. ಇದು ರಾಜ್ಯಾದ್ಯಂತ ಚರ್ಚೆಗೂ ಗ್ರಾಸವಾಗಿದೆ. ಇನ್ನು ಸಿಎಂ ಹೋದಲ್ಲೆಲ್ಲ ಭದ್ರತೆ ಸಾಕಷ್ಟು ಹೆಚ್ಚಿಸಲಾಗಿದ್ದು, ಸಿಎಂ ಇರುವ ಕಡೆ ಸಂಚಾರ ನಿರ್ಬಂಧಿಸಿರುವುದು ಸಹ ಸಾಕಷ್ಟು ಟೀಕೆಗೆ ಗುರಿಯಾಗಿದೆ.