ಬೆಂಗಳೂರು: ಆತನಿಗೀಗ 24 ವರ್ಷ. ಪ್ರತಿಷ್ಠಿತ ಶೋರೂಮ್ನಲ್ಲಿ ಕೆಲಸ ಮಾಡುತ್ತಿದ್ದ ಆತ, ತಾನಾಯ್ತು ತನ್ನ ಪಾಡಾಯ್ತು ಎಂದು ಸುಮ್ಮನಿದ್ದಿದ್ದರೆ ನೆಮ್ಮದಿ ಜೀವನ ಸಾಗಿಸುತ್ತಿದ್ದ. ಆದರೆ, ಅನೈತಿಕ ಸಂಬಂಧದ ದಾಹಕ್ಕೆ ಬಲಿಯಾಗಿದ್ದಾನೆ. ಸದ್ಯ ಈ ಕೊಲೆಗೆ ಕಾರಣರಾಗಿದ್ದ 12 ಮಂದಿ ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟದ ನಿವಾಸಿ ಅಜಯ್ ಬಲಿಯಾದ ದುದೈರ್ವಿ. ಆರೋಪಿಗಳಾದ ಆನಂದ್, ರೂಪಾ, ಕುಮಾರ್, ಚೇತನ್, ಮುನಿಕೃಷ್ಣ, ಸಂಜು, ಅಂಜಿ, ಬಾಲರಾಜ್, ಶ್ರೀಕಾಂತ್, ವಿಜಯ್, ನಾಗರಾಜ್ ಹಾಗೂ ಮುತ್ತು ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬನ್ನೇರುಘಟ್ಟದ ನಿವಾಸಿ ಅಜಯ್ ಮೈಕೊ ಲೇಔಟ್ ರಾಯಲ್ ಎನ್ ಫೀಲ್ಡ್ ಶೋ ರೂಂನಲ್ಲಿ ಮೆಕ್ಯಾನಿಕ್ಆಗಿ ಕೆಲಸ ಮಾಡುತ್ತಿದ್ದ. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಬರುವ ಸಂಬಳದಲ್ಲಿ ತನ್ನ ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡಿ ಎಂಜಾಯ್ ಮಾಡ್ತಿದ್ದ. ತಾನಾಯಿತು ತನ್ನ ಪಾಡಾಯ್ತು ಅಂತಾ ಇದ್ದವನಿಗೆ ಒಂದೂವರೆ ವರ್ಷದ ಹಿಂದೆ ಯುವತಿಯೊಬ್ಬರಿಂದ ವ್ಯಾಟ್ಸಪ್ನಲ್ಲಿ ಮಿಸ್ಡ್ ಕಾಲ್ ಬಂದಿತ್ತು.
ಆ ಕರೆ ಯಾರದಿರಬಹುದು ಎಂದು ತಿಳಿದುಕೊಳ್ಳಲು ಮತ್ತೆ ಕಾಲ್ ಮಾಡಿದ್ದ. ಆಗ ಹೆಣ್ಣಿನ ಮಾದಕ ಧ್ವನಿಗೆ ಮರುಳಾಗಿದ್ದ. ಆಕೆಯ ಹೆಸರು ಸಂಗೀತ(ಹೆಸರು ಬದಲಾಯಿಸಲಾಗಿದೆ). ಆತನ ಪಕ್ಕದ ಏರಿಯಾದ ವಿವಾಹಿತ ಮಹಿಳೆ ಎಂಬುದನ್ನು ತಿಳಿದುಕೊಂಡ. ಬಳಿಕ ಇವರಿಬ್ಬರ ನಡುವೆ ಬೆಳೆದಿದ್ದ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಅದು ಅನೈತಿಕ ಸಂಬಂಧವರೆಗೂ ಹೆಮ್ಮರವಾಗಿ ಬೆಳೆಯಿತು. ಈ ವಿಚಾರ ಆಕೆಯ ಪತಿ ಆನಂದ್ ಗೊತ್ತಾಗಿದೆ. ಮತ್ತೆ ಸಂಬಂಧ ಬೆಳೆಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಅಜಯ್ಗೆ ಆನಂದ್ ಎಚ್ಚರಿಸಿದ್ದ.
ಎಚ್ಚರಿಗೆ ಅಂಜದ ಅಜಯ್ ಸಂಗೀತಳ ಜೊತೆ ಸಂಬಂಧ ಮುಂದುವರಿಸಿದ್ದ. ಇದನ್ನು ತಿಳಿದ ಆನಂದ್ ಕೋಪಗೊಂಡು ಆತ ಪತ್ನಿ ಮೇಲೆ ಹಲ್ಲೆ ನಡೆಸಿದ. ತಾನು ಹೇಳಿದಂತೆ ಕೇಳಬೇಕೆಂದು ಎಚ್ಚರಿಸಿದ್ದ. ಅಜಯ್ ಮುಗಿಸಲು ಸ್ಕೆಚ್ ಹಾಕಿದ್ದ ಆನಂದ್ ತನ್ನ ಪತ್ನಿಯಿಂದಲೇ ಆತನಿಗೆ ಕಾಲ್ ಮಾಡಿಸಿ ಅಪಘಾತವಾಗಿದೆ ಎಂದು ಹೇಳುವಂತೆ ಹೇಳಿ ಅಜಯ್ನನ್ನು ಜಿಗಣಿಗೆ ಕರೆಸಿಕೊಂಡಿದ್ದ.
ಆನಂದ್ ಸೇರಿದಂತೆ ಆತನ ಗ್ಯಾಂಗ್ ಸ್ಥಳಕ್ಕೆ ಬಂದ ಅಜಯ್ನನ್ನು ಕಾರಿಗೆ ಹತ್ತಿಸಿಕೊಂಡು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನ ಬಳಿ ದಟ್ಟ ಅರಣ್ಯಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದರು. ಅಲ್ಲಿಯೇ ಹೂತು ಹಾಕಿದ್ದರು ಎಂದು ಪೊಲೀಸರು ಹೇಳಿದರು.