ಬೆಂಗಳೂರು: ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಕನಾಗಿ ಕೆಲಸ ಮಾಡುತ್ತಿರುವ ದೇಶದ ನ್ಯಾಯಾಂಗ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ. ಈ ಸಮಾಜವನ್ನು ಸ್ವಚ್ಛಗೊಳಿಸುವ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.
ಬೆಂಗಳೂರಿನ ಜಿಕೆವಿಕೆಯಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ಆಯೋಜಿಸಿದ್ದ 20ನೇ ದ್ವೈವಾರ್ಷಿಕ ರಾಜ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನ್ಯಾಯಾಧೀಶರ ವೃತ್ತಿ ಅತ್ಯಂತ ಜವಾಬ್ದಾರಿಯುತವಾದದ್ದು. ನ್ಯಾಯಾಧೀಶರಾಗಿ ಕೆಲಸ ಮಾಡುವವರಿಗೆ ಅವರದೇ ಮಿತಿಗಳಿರುತ್ತವೆ. ಸಿಟ್ಟು ಬಂದರೆ ಬೈಯ್ಯಲೂ ಆಗದ, ಖುಷಿಯಾದರೆ ಜೋರಾಗಿ ನಗಲೂ ಆಗದ, ಶಿಸ್ತು ಸಂಹಿತೆಗಳ ಒಳಗೆ ತಮ್ಮ ಮುಂದಿನ ಪ್ರಕರಣವನ್ನು ಇತ್ಯರ್ಥಪಡಿಸುವ, ನ್ಯಾಯದಾನ ಮಾಡುವ ನ್ಯಾಯಾಧೀಶರ ವೃತ್ತಿ ಅತ್ಯಂತ ಒತ್ತಡದಿಂದ ಕೂಡಿರುತ್ತದೆ ಎಂದು ವಿಶ್ಲೇಷಿಸಿದರು.
ಜಿಲ್ಲಾ ನ್ಯಾಯಾಲಯಗಳು ವಿಳಂಬ ಮಾಡಬಾರದು: ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಮಾತನಾಡಿ, 'ಪರಿಣಾಮಕಾರಿ ನ್ಯಾಯಾಂಗ ವ್ಯವಸ್ಥೆ ಹುಟ್ಟುವುದೇ ಜಿಲ್ಲಾ ಮಟ್ಟದ ನ್ಯಾಯಾಧೀಶರಿಂದ. ಜಿಲ್ಲಾ ನ್ಯಾಯಾಲಯಗಳು ಜಾಮೀನು ಅರ್ಜಿಗಳ ವಿಚಾರಣೆಯಲ್ಲಿ ವಿಳಂಬ ಮಾಡಬಾರದು ಮತ್ತು ಧೈರ್ಯವಹಿಸಿ ತೀರ್ಮಾನ ಕೈಗೊಳ್ಳುವಲ್ಲಿ ಹಿಂದೆ ಬೀಳಬಾರದು. ಡಿಜಿಟಲೀಕರಣ ಮತ್ತು ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯಗಳ ಮೇಲಿನ ಹೈಕೋರ್ಟ್ ನಂಬಿಕೆ ಹೆಚ್ಚಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜಿಲ್ಲಾ ನ್ಯಾಯಾಧೀಶರ ಮೇಲಿದೆ' ಎಂದರು.
ಕಾರ್ಯಕ್ರಮದಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಅಜ್ಜಿಕುಟೀರ ಬೋಪಣ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: ಹೈಕೋರ್ಟ್ಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ: ತಮಿಳುನಾಡಿನಲ್ಲಿ ಸಿಜೆಐ ಹೇಳಿದ್ದೇನು?