ಬೆಂಗಳೂರು: ದಶಕಗಳ ಕಾಲದಿಂದ ತಲೆನೋವಾಗಿ ಉಳಿದಿರುವ ಅಯೋಧ್ಯೆ ರಾಮಮಂದಿರ–ಬಾಬರಿ ಮಸೀದಿ ಭೂಮಿ ವಿವಾದ ವಿಚಾರವಾಗಿ ಸದ್ಯದಲ್ಲೇ ತೀರ್ಪು ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಅಯೋಧ್ಯೆ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ಕೋಮುಗಲಭೆ ಸೇರಿದಂತೆ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅದಕ್ಕೂ ಮುನ್ನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಕರೆಸಿಕೊಂಡಿದ್ದ ಕೇಂದ್ರದ ನಾಯಕರು, ಅಯೋಧ್ಯೆ ತೀರ್ಪು ನವೆಂಬರ್ 2ನೇ ವಾರ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ಜಿಲ್ಲೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.