ಬೆಂಗಳೂರು: ರಾಗಿ ಖರೀದಿಗೆ ಸಂಬಂಧಿಸಿದಂತೆ ಸದನದಲ್ಲಿ ಸ್ಪೀಕರ್ ಅವರ ಅನುಮತಿ ಪಡೆಯದೇ ವಿಷಯ ಪ್ರಸ್ತಾಪಿಸಲು ಮುಂದಾದ ಕೆಲ ಕಾಂಗ್ರೆಸ್ ಸದಸ್ಯರ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗರಂ ಆದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು.
ಶೂನ್ಯ ವೇಳೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರಾದ ಡಾ.ರಂಗನಾಥ್ ಮತ್ತು ವೆಂಕಟರಮಣಯ್ಯ ಸೇರಿದಂತೆ ಕೆಲ ಸದಸ್ಯರು, ರಾಗಿ ಖರೀದಿ ಸ್ಥಗಿತಗೊಂಡಿದೆ. ಈ ಕುರಿತು ಮಾತನಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿ, ರಾಗಿ ರಾಗಿ ರಾಗಿ ಎಂದು ಏರು ದ್ವನಿಯಲ್ಲಿ ಘೋಷಣೆಗಳನ್ನು ಕೂಗುತ್ತಾ, ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಸಿಟ್ಟಿಗೇರಿದ ಸ್ಪೀಕರ್ ಕಾಗೇರಿ ಅವರು, ಅಸಭ್ಯವಾಗಿ ವರ್ತಿಸದೆ, ಸೌಜನ್ಯದಿಂದ ವರ್ತಿಸಿ ಎಂದು ಗುಡುಗಿದರು.
ಈಗಾಗಲೇ ರಾಗಿ ಬಗ್ಗೆ ಎರಡು ಬಾರಿ ಸದನದಲ್ಲಿ ಚರ್ಚೆಯಾಗಿ ಸರ್ಕಾರ ಮೂರು ಲಕ್ಷ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದೆ. ನಿಯಮಾವಳಿಗಳ ಪ್ರಕಾರ ಒಂದು ಬಾರಿ ಪ್ರಸ್ತಾಪಿಸದ ವಿಚಾರವನ್ನು ಮತ್ತೆ ಪ್ರಸ್ತಾಪಿಸಲು ಅವಕಾಶವಿಲ್ಲ. ಆದರೂ ಇದು ಮಾನವೀಯತೆಯ ದೃಷ್ಟಿಯಿಂದ ಎರಡು ಬಾರಿ ಅವಕಾಶ ಕೊಟ್ಟಿದ್ದೇನೆ. ಈ ರೀತಿ ರಾಗಿ ರಾಗಿ ಎಂದು ಘೋಷಣೆ ಹಾಕಿ ಮಾತನಾಡಲು ಮಾರ್ಕೆಟ್ ಅಲ್ಲ. ಈ ರೀತಿಯ ಅಸಭ್ಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಟ್ಟಾದರು.
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮಧ್ಯೆ ಪ್ರವೇಶಿಸಿ, ಅವರಿಗೆ ಸಮಸ್ಯೆ ಇದೆ. ಅವಕಾಶ ನೀಡಿ ಎಂದು ಸ್ಪೀಕರ್ಗೆ ಮನವಿ ಮಾಡಿದರು. ಇದಕ್ಕೆ ಕೃಷ್ಣ ಭೈರೇಗೌಡ ಸಹ ಧ್ವನಿಗೂಡಿಸಿ, ಸಭಾಧ್ಯಕ್ಷರಿಗೆ ಅಗೌರವ ತರುವ ಉದ್ದೇಶ ಅವರಿಗಿಲ್ಲ. ರಾಗಿ ಬೆಳೆಯುವ ಪ್ರದೇಶದಿಂದ ನಾವು ಬಂದಿದ್ದೇವೆ. ಹಾಗಾಗಿ ಅವಕಾಶ ಕೇಳುತ್ತಿದ್ದೇವೆ ಎಂದರು.
ಆಗ ಸ್ವಲ್ಪ ಸಮಾಧಾನಗೊಂಡ ಸಭಾಧ್ಯಕ್ಷರು, ನನಗೆ ಪತ್ರ ನೀಡಿದರೆ ಅವಕಾಶ ನೀಡುತ್ತೇನೆ. ಪತ್ರ ನೀಡದೆ ಅವಕಾಶ ಕೊಡಿ ಎಂದರೆ ಸಾಧ್ಯವಿಲ್ಲ. ಸದನ ನಡೆಸಲು ನಿಯಮಾವಳಿಗಳಿವೆ. ಸಮಾಧಾನದಿಂದ ಹೇಳಬೇಕು. ಘೋಷಣೆ ಕೂಗುವುದು ಸರಿಯಲ್ಲ. ಈ ವಿಷಯ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದರು.