ಬೆಂಗಳೂರು: ಸದನದಲ್ಲಿ ಗೃಹ ಸಚಿವರು ತಪ್ಪು ಉತ್ತರ ಕೊಟ್ಟಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬಾಯಿ ಮುಚ್ಚಿಸೋಕೆ ನೊಟೀಸ್ ಕೊಟ್ಟಿದ್ರೆ ಸರಿಯಲ್ಲ. ನನಗೂ ಕಾನೂನಿನ ಬಗ್ಗೆ ತುಂಬಾ ಅರಿವಿದೆ. ನಾನು ಕಾನೂನು ಮೂಲಕವೇ ನೊಟೀಸ್ ಕೊಡಿಸುತ್ತೇನೆ ಎಂದಿದ್ದಾರೆ.
ಇಂದು ಸಿಐಡಿಗೆ ಎಲ್ಲವನ್ನು ಕೊಟ್ಟಿದ್ದೇನೆ. ನನ್ನನ್ನು ಕರೆದಂತೆ ಸಚಿವರನ್ನು ಕರೆಯಿರಿ. ಪತ್ರ ಬರೆದ ಎಂಎಲ್ಸಿಗಳಿಂದ ಮಾಹಿತಿ ತೆಗೆದುಕೊಳ್ಳಿ. ಯಾಕೆ ಅವರಿಗೆ ನೊಟೀಸ್ ಕೊಟ್ಟಿಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಕಾನೂನಿನ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ. ನಾನೂ ಕಾನೂನು ನೊಟೀಸ್ ಕೊಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಲಿಖಿತ ಉತ್ತರ ಕೊಟ್ಟಿದ್ದಾರೆ. ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅದನ್ನೂ ಕೂಡ ನೀವು ಸಿಐಡಿಗೆ ಕೊಡಬೇಕಲ್ಲ. ಐವರು ಅಭ್ಯರ್ಥಿಗಳು ದೂರು ಕೊಟ್ಟಿದ್ದರು. ಆಗ ಏನೂ ತಪ್ಪಾಗಿಲ್ಲ ಅಂದ್ರಲ್ಲಾ. ಈಗ ತಪ್ಪಾಗಿದೆ ಎಂಬುದು ಗೊತ್ತಾಗಿದೆಯಲ್ಲ. ಅಭ್ಯರ್ಥಿಗಳು ಸಲ್ಲಿಸಿದ ದೂರಿನ ವರದಿ ಏನಾಯ್ತು.
ಇನ್ನೆಷ್ಟು ಹೆಗ್ಗಣಗಳು ಇವೆಯೋ ಗೊತ್ತಿಲ್ಲ: ಈಗ ಬಂದಿರೋದು ಸಣ್ಣ ಸಣ್ಣವರಷ್ಟೇ. ವಿಧಾನಸೌಧದಲ್ಲಿ ಇನ್ನೆಷ್ಟು ಹೆಗ್ಗಣಗಳು ಇವೆಯೋ ಗೊತ್ತಿಲ್ಲ. ನಾನು ಸಾರ್ವಜನಿಕ ಬದುಕಿನಲ್ಲಿರುವವನು. ಕಾನೂನಿನ ಪ್ರಕಾರವೇ ನಾನು ಉತ್ತರ ಕೊಟ್ಟಿದ್ದೇನೆ. ಆದರೆ, ಕಾನೂನಿನ ಅರಿವು ನಿಮಗಿಲ್ಲವೇ. ಮಾನ ಮರ್ಯಾದೆ ಇರುವವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವರು, ಪ್ರಿಯಾಂಕ್ ಖರ್ಗೆ ಬಳಿ ಮಾಹಿತಿ ಇದ್ದರೆ ಸಿಐಡಿಗೆ ಕೊಡಲಿ, ಏಕೆ ಅವರಿಗೆ ಭಯ ಎಂದು ಹೇಳಿದ್ದಾರೆ. ನಿಮಗೆ ಕಾನೂನು ಗೊತ್ತಿಲ್ಲ ಅಂದರೆ ಕಾನೂನು ತಿಳಿದುಕೊಳ್ಳಿ. ವಾಟ್ಸ್ಆ್ಯಪ್ ಸಂಸ್ಕೃತಿಯಿಂದ ಹೊರಗೆ ಬನ್ನಿ. ಗೃಹ ಸಚಿವರೇ ಕಾನೂನು, ಸಂವಿಧಾನ ಸ್ವಲ್ಪ ಓದಿ. ಕಾನೂನು ಸಚಿವರಿಂದ ಮಾಹಿತಿ ಪಡೆಯಿರಿ. ನಿಗದಿತ ದಾಖಲೆಗಳು ಇದ್ದರೆ ಅದನ್ನು ವಕೀಲರ ಮೂಲಕ ಕಳುಹಿಸಿಕೊಡಬಹುದು ಎಂದು ಕಾನೂನಿನಲ್ಲಿ ಹೇಳಲಾಗಿದೆ. ನಾನು ವಿಚಾರಣೆಗೆ ಏಕೆ ಹೋಗಲಿ? ಉಪ್ಪು ತಿಂದವನು ನೀರು ಕಡಿಯಲೇಬೇಕು. ನೀವೆಲ್ಲರೂ ಒಳಗೆ ಹೋಗ್ತೀರ ಎಂದರು.
ಇದನ್ನೂ ಓದಿ: ಬೊಮ್ಮಾಯಿ ಎಲೆಕ್ಟೆಡ್ ಸಿಎಂ ಅಲ್ಲ, ಅಪಾಯಿಂಟೆಡ್ ಸಿಎಂ: ಸಿದ್ದರಾಮಯ್ಯ ವ್ಯಂಗ್ಯ