ಬೆಂಗಳೂರು: ಹೈಕಮಾಂಡ್ ನನಗೆ ಆಡಳಿತ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರಾಜ್ಯದ ಜನತೆಯ ಆಶೀರ್ವಾದದಿಂದ ಬಿಜೆಪಿ ಸರ್ಕಾರ ಬಂದಿದೆ. ಅಭಿವೃದ್ಧಿಯೇ ಆಡಳಿತದ ಮಂತ್ರದೊಂದಿಗೆ ಸರ್ಕಾರ ಕಾರ್ಯಾರಂಭ ಮಾಡಿದೆ. ಸರ್ಕಾರ ಬಂದ ಆರಂಭದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಕೈಜೋಡಿಸಿತ್ತು. ಕೇಂದ್ರದ ಈ ಯೋಜನೆಯ ನೆರವಿನ ಜತೆಗೆ ರಾಜ್ಯದಿಂದ ಹೆಚ್ಚುವರಿ ನೆರವು ಕೊಡಲಾಗ್ತಿದೆ. ಮೀನುಗಾರರ, ನೇಕಾರರ ಸಾಲಮನ್ನಾ ಮಾಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಳಿಗೆ ಆರಂಭದಲ್ಲೇ ಸರ್ಕಾರದ ಧ್ಯೇಯೋದ್ದೇಶ ತಿಳಿಸಲಾಯಿತು. ದುರಾದೃಷ್ಟವಶಾತ್ ರಾಜ್ಯದಲ್ಲಿ ನೆರೆ,ಅತಿವೃಷ್ಟಿ ಬಂದಿದ್ದು,ಅಧಿಕಾರಿಗಳು ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದರು.
ಮುಂದಿನ ಅಧಿವೇಶನದಿಂದ ಮಾಧ್ಯಮ ನಿರ್ಬಂಧ ಇಲ್ಲ: ಮಾಧ್ಯಮ ನಿರ್ಬಂಧ ವಿಚಾರವಾಗಿ ಸ್ಪಷ್ಟನೆ ನೀಡಿದ ಸಿಎಂ, ನಾನು ಸ್ಪೀಕರ್ ಜತೆ ಮಾತನಾಡಿ ಮನವರಿಕೆ ಮಾಡುತ್ತೇನೆ. ಮುಂದಿನ ಅಧಿವೇಶನದಿಂದ ಮಾಧ್ಯಮ ನಿರ್ಬಂಧ ಇರಲ್ಲ. ಮುಂದಿನ ಅಧಿವೇಶನದಿಂದ ಮೊದಲಿದ್ದ ವ್ಯವಸ್ಥೆಯೇ ಬರಲಿದೆ. ಮಾಧ್ಯಮಗಳಿಗೆ ಮೊದಲಿನ ಹಾಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಡಿಯೂರಪ್ಪ ಹೇಳಿದ ಮಾತಿನಂತೆ ನಡೆದುಕೊಳ್ತಾನೆ ಎಂದು ಭರವಸೆ ನೀಡಿದರು.
ಮೂರು ಜನ ಉಪಮುಖ್ಯಮಂತ್ರಿಗಳ ಸೃಷ್ಟಿ ಕೇಂದ್ರದ ವರಿಷ್ಟರ ನಿರ್ಧಾರವಾಗಿದ್ದು, ಇದರಲ್ಲಿ ತಪ್ಪಿದೆ ಅಂತ ನನಗೆ ಅನಿಸ್ತಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮೂರು ತಿಂಗಳಲ್ಲಿ ಐಎಎಸ್ ಅಧಿಕಾರಿಗಳ ಬದಲಾವಣೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಆಡಳಿತಾತ್ಮಕ ನಿರ್ಧಾರದಿಂದ ಕೆಲವು ತೀರ್ಮಾನ ಅನಿವಾರ್ಯ. ಆಡಳಿತದ ಹಿತದೃಷ್ಟಿಯಿಂದ ಕೆಲವೊಂದು ತೀರ್ಮಾನ ಮಾಡಬೇಕು. ಈ ಬಗ್ಗೆ ಹೆಚ್ಚು ಚರ್ಚೆ ಮಾಡೋದಿಲ್ಲ ಎಂದು ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಾತಾಡಲು ಸಿಎಂ ನಿರಾಕರಿಸಿದರು.
ಬಿಜೆಪಿಯವರ ಜತೆ ಗುರುತಿಸಿಕೊಂಡವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಾರೆ ಅನ್ನೋ ವಿಚಾರ ಸರಿಯಲ್ಲ. ಸಮಿತಿಯಲ್ಲಿ ನಡೆದ ತೀರ್ಮಾನದ ಹಾಗೆ 64 ಜನರಿಗೂ ನೀಡಿದ್ದೇವೆ. ನಾನು ಕೂಡ ಸಭೆಯಲ್ಲಿ ಸಲಹೆ ನೀಡಿದ್ದೇನೆ. ಒಂದೆರೆಡರ ಬಗ್ಗೆ ಆಕ್ಷೇಪ ಇದೆ. ಆದರೆ ಎಲ್ಲಾವೂ ಸಮಿತಿ ಸದಸ್ಯರು ಚರ್ಚೆ ಮಾಡಿ, ತೀರ್ಮಾನ ಮಾಡಿದ್ದಾರೆ. ನಾವು ಆಯ್ಕೆ ಮಾಡಿರುವ 64 ಜನರ ಬಗ್ಗೆ ರಾಜ್ಯದ ಜನರಿಗೆ ಹೆಮ್ಮೆಯಿದೆ ಎಂದರು.
ಎನ್ಡಿಆರ್ಎಫ್ ನಿಯಮದಡಿ ನಿಗದಿ ಮಾಡಿದ ಪರಿಹಾರಕ್ಕಿಂತ ಹೆಚ್ಚು ಪರಿಹಾರ ಕೊಡ್ತಿದೀವಿ. ಸ್ವಾತಂತ್ರ್ಯ ನಂತರ ಯಾವುದೇ ಸರ್ಕಾರ ಎನ್ಡಿಆರ್ಎಫ್ ನಿಯಮ ಮೀರಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಪ್ರವಾಹಕ್ಕೆ ಕೇಂದ್ರದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಮಧ್ಯಂತರ ಪರಿಹಾರವಾಗಿ ಕೇಂದ್ರ 1200 ರೂ. ಕೋಟಿ, ರಾಜ್ಯದಿಂದ 2969 ರೂ. ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ತೆರಿಗೆ ಸಂಗ್ರಹದಲ್ಲಿ ಸರ್ಕಾರ ನಿಗದಿತ ಗುರಿ ಸಾಧಿಸಿದೆ . ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು 5 ಲಕ್ಷ ರೂ. ಪರಿಹಾರ ಕೊಡ್ತಿದ್ದೇವೆ. ಇದುವರೆಗೆ ಪೂರ್ಣ ಹಾನಿಯಾದ 7481 ಮನೆಗಳಿಗೆ 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ ಎಂದರು.