ಬೆಂಗಳೂರು: ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆದು ಸಮರ್ಪಕ ಪ್ರಮಾಣದಲ್ಲಿ ಮೇವು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟ್‌ಗೆ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎ. ಮಲ್ಲಿಕಾರ್ಜುನ್, ಹೈಕೋರ್ಟ್ ಕಾನೂನು ಸೇವಾ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ರಾಜ್ಯದಲ್ಲಿ ಅಗತ್ಯ ಇರುವ ಕಡೆಯಲ್ಲಿ ಗೋಶಾಲೆ ತೆರೆದು ಸಮರ್ಪಕ ಪ್ರಮಾಣದಲ್ಲಿ ಮೇವು ಒದಗಿಸಲು ಸರ್ಕಾರ ಸಿದ್ಧವಿದೆ. ಅಲ್ಲದೇ ಈಗಾಗಲೇ ಮುಚ್ಚಲಾಗಿರುವ ಗೋಶಾಲೆಗಳ ಬಗ್ಗೆ ಮರು ಪರಿಶೀಲನೆ ನಡೆಸಿ, ಅಗತ್ಯವಿರುವ ಕಡೆ ಪುನರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರದ ಪರ ಹೈಕೋರ್ಟ್‌ಗೆ ಭರವಸೆ ನೀಡಿದರು.
ರಾಜ್ಯದಲ್ಲಿ ನೈಸರ್ಗಿಕ ವಿಕೋಪ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದು ಸಂಪೂರ್ಣ ವಿವರ ಹಾಗೂ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ? ಯಾವುದು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ? ಬರಪೀಡಿತ ಪ್ರದೇಶದಲ್ಲಿ ಗೋಶಾಲೆಗಳನ್ನು ಆರಂಭಿಸಲಾಗಿದೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಅ.24ರಂದು ವಿವರ ನೀಡಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.