ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದರೂ ಎರಡು- ಮೂರು ತಿಂಗಳಿಂದ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಸರ್ಕಾರದಿಂದ ಯಾವುದೇ ಉತ್ತರ ಇಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸಭೆ ಬಳಿಕ ಮಾತನಾಡಿದ ಶಾಸಕ ಕೃಷ್ಣ ಭೈರೇಗೌಡ, ಜನರು ಸಮಸ್ಯೆಯಲ್ಲಿದ್ದಾರೆ, ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ ಅಷ್ಟೇ. ಅನಾಹುತ ಆದ ಮೇಲೆ ಶಾಸಕರನ್ನು ಕರೆದಿದ್ದಾರೆ. ತಮ್ಮಿಂದಾದ ಅನಾಹುತವನ್ನು ನಮ್ಮ ಮೇಲೆ ಹಾಕಲು ಕರೆಸಿದ್ದಾರೆ ಎಂದು ದೂರಿದರು.
ಸಂಸದ ಡಿ.ಕೆ ಸುರೇಶ್ ಮಾತನಾಡಿ, ರೋಗಿಗಳು ಸಾಯುತ್ತಿದ್ದಾರೆ. ವೈರಾಣು ಬಹಳ ಬೇಗ ಹರಡುತ್ತಿದೆ. ಅವರು (ಸರ್ಕಾರ) ಮುಳುಗುತ್ತಿದ್ದಾರೆ. ನಮ್ಮನ್ನು ಸೇರಿ ಮುಳುಗಿಸುತ್ತಿದ್ದಾರೆ. ಪಿಎಂ ಕೇರ್ನಿಂದ ಬಂದ ವೆಂಟಿಲೇಟರ್ ಬಗ್ಗೆಯೂ ಮಾಹಿತಿ ನೀಡಿಲ್ಲ. ಬಡವರಿಗೆ ಆಸ್ಪತ್ರೆ ವ್ಯವಸ್ಥೆ ಆಗುತ್ತಿದೆ. ಆದರೆ, ಮಧ್ಯಮ ವರ್ಗದವರ ಬಗ್ಗೆ ಸರ್ಕಾರದ ಉತ್ತರ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಬಗ್ಗೆ ವಿಶ್ವಾಸ ಇಟ್ಟುಕೊಳ್ಳಬೇಡಿ, ಈ ಸರ್ಕಾರವನ್ನ ನಂಬ ಬೇಡಿ, ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿದ ಅವರು, ಜನರಿಗೆ ಸಹಾಯ ಮಾಡದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸಲಹೆ ಅಲ್ಲ ಜನರಿಗೆ ಆಗಿರೋ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಔಷಧ ಸ್ಟಾಕ್ ಇದೆ ಅಂತಾರೆ ಅದು ಇಲ್ಲ. ಎಲ್ಲೆಂದ್ರಲ್ಲಿ ಮಾರಾಟ ಆಗ್ತಿದೆ. ಒಂದು ದಿನಕ್ಕೆ 14 ಸಾವಿರ ಕೇಸ್ ಆಗ್ತಿದೆ. ಜನರಲ್ ಬೆಡ್ ಕೂಡ ಸಿಗ್ತಿಲ್ಲ. ಚೆನೈ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗ್ತಿದೆ. ಆದರೆ, ನಮ್ಮಲ್ಲಿ ಒಂದಿಷ್ಟು ಪ್ರಿಪರೇಷನ್ ಕೂಡ ತೆಗೆದುಕೊಂಡಿಲ್ಲ ಎಂದು ದೂರಿದರು.
ಕಳೆದ ಬಾರಿ ಏಕಾಏಕಿ ಲಾಕ್ಡೌನ್ ಮಾಡಿದ್ರು. ದಿನನಿತ್ಯ ಜೀವನ ಮಾಡುವವರಿಗೆ ಕಷ್ಟವಾಯ್ತು. ಸಂಪಾದನೆ ಇಲ್ಲದೆ ಜೈಲಿಗೆ ಹಾಕಿದಂತೆ ಆಯ್ತು. ಊರುಗಳಿಗೆ ಹೋಗಲು ತೊಂದರೆ ಆಯ್ತು. ಇದೀಗ ನಮಗೆ ಸಲಹೆ ಕೊಡಲು ಹೇಳಿದ್ರು. ಅದಾದ ಮೇಲೆ ನಾವು ನಿರ್ಧಾರ ಮಾಡ್ತೀವಿ ಅಂತ ಹೇಳಿದ್ದಾರೆ. ಲಾಕ್ಡೌನ್ ಮಾಡೋದು ಬೇಡ ಅಂತ ಹೇಳಿದ್ದೇವೆ ಎಂದು ಹೇಳಿದರು.
ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕಳೆದ ಬಾರಿ ಕೋವಿಡ್ ಬಂದಾಗ ಸಿಎಂ ಬಳಿ ಮನವಿ ಮಾಡಿದ್ದೆವು. ನಾವು ಸುಡಲ್ಲ, ಮಣ್ಣು ಮಾಡೋದು. ಅದಕ್ಕಾಗಿ ಖಬರಸ್ತಾನ್ ಕೇಳಿದ್ದೇವೆ. ರಂಜಾನ್ ಬಂದಿರುವುದರಿಂದ ಅನೇಕ ಕ್ರಮ ತೆಗೆದುಕೊಂಡಿದ್ದೀವಿ. ನಮಾಜ್ ಮಾಡೋದ್ರಲ್ಲೂ ನಿಯಮ ಪಾಲಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ.. ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಾಗಿದೆ: ಡಿ.ಕೆ.ಶಿವಕುಮಾರ್