ಬೆಂಗಳೂರು: ಹಂತ ಹಂತವಾಗಿ ಶಾಲಾ - ಕಾಲೇಜಿನ ಭೌತಿಕ ತರಗತಿಗಳನ್ನು ಆರಂಭ ಮಾಡಲಾಗುತ್ತಿದೆ. ಸದ್ಯದ ಮಟ್ಟಿಗೆ ಪ್ರಾಥಮಿಕ ಶಾಲೆಗಳ ಆರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ವಿಚಾರದಲ್ಲಿ ಸರ್ಕಾರ ಆತುರದ ಹೆಜ್ಜೆ ಇಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ರಿಂದ 5ರವರೆಗೆ ಭೌತಿಕ ತರಗತಿ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಪ್ರಾಥಮಿಕ ಶಾಲೆ ಆರಂಭಿಸುವ ಬಗ್ಗೆ ತಜ್ಞರು ಯಾವುದೇ ಸಲಹೆಯನ್ನು ನೀಡಿಲ್ಲ. ಹಾಗಾಗಿ ಈಗ ಅಂತಹ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದರು.
ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಕಾರಣಕ್ಕಾಗಿ ಭೌತಿಕ ತರಗತಿಗಳನ್ನು ಮುಚ್ಚಿದ್ದು, ಈಗ ಹಂತ ಹಂತವಾಗಿ ಆರಂಭಿಸಲಾಗುತ್ತಿದೆ. ಇಳಿಕೆ ಕ್ರಮದಂತೆ ತರಗತಿಗಳ ಆರಂಭ ಮಾಡಲಾಗಿದೆ. ಸ್ನಾತಕೋತ್ತರ, ಸ್ನಾತಕ, ಪದವಿ ಪೂರ್ವ ತರಗತಿಗಳ ನಂತರ, ಪ್ರೌಢ ಶಾಲಾ ಹಂತಕ್ಕೆ ಬರಲಾಗಿದೆ. ಮೊದಲು 9 ನೇ ತರಗತಿಯಿಂದ ದ್ವಿತೀಯ ಪಿಯುಸಿಗೆ ಅವಕಾಶ ನೀಡಿ ನಂತರ 6 ನೇ ತರಗತಿಯಿಂದ 8 ನೇ ತರಗತಿವರೆಗಿನ ತರಗತಿಗಳನ್ನು ಆರಂಭ ಮಾಡಲಾಗಿದೆ.
ಇದನ್ನೂ ಓದಿ: ಬಿಜೆಪಿ ಶಾಸಕರು, ಸಂಸದರ ಜೊತೆ ಇಂದು ಸಿಎಂ ಬೊಮ್ಮಾಯಿ ಸಭೆ
ಸದ್ಯ 1 ರಿಂದ 5ರವರೆಗೆ ಭೌತಿಕ ತರಗತಿಗಳ ಆರಂಭ ಬಾಕಿ ಇದೆ. ಮೂರನೇ ಅಲೆಯ ಪರಿಸ್ಥಿತಿ ನೋಡಿಕೊಂಡು ತಜ್ಞರ ಸಮಿತಿ ಸಲಹೆಯಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದರು.