ಬೆಂಗಳೂರು: ಭಾರತಕ್ಕೆ ಅಕ್ರಮವಾಗಿ ನುಸುಳುವ ಬಾಂಗ್ಲಾದೇಶಿಗರನ್ನು ಹೊರಗೆ ಅಟ್ಟಬೇಕೆಂಬ ತೀವ್ರ ಚರ್ಚೆ ಬೆನ್ನಲೇ ನಗರದ ಸಿಸಿಬಿ ಪೊಲೀಸರು ಸದ್ದಿಲ್ಲದೇ ರಾಜಧಾನಿಯಲ್ಲಿ ಬೇರೂರಿದ್ದ 60 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರ, ಬೆಳ್ಳಂದೂರು, ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಿಸಿಬಿ ವಿಶೇಷ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ನೆಲೆಸಿದ್ದ 29 ಮಂದಿ ಪುರುಷರು, 22 ಮಂದಿ ಮಹಿಳೆಯರು, 9 ಯುವತಿಯರು ಸೇರಿದಂತೆ 60 ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಬಂಧಿತರನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸಲು ಡಿಪೋರ್ಟ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದರು.
ನಗರದಲ್ಲಿ ಇವರೆಲ್ಲ ಗುತ್ತಿಗೆ ಆಧಾರದ ಮೇಲೆ ಕಸ ಹಾಯುವುದು, ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಬಂಧಿತ ಹೆಣ್ಣು ಮಕ್ಕಳನ್ನು ಹಾಗೂ ಮಕ್ಕಳನ್ನು ನಿರಾಶ್ರಿತ ಕೇಂದ್ರಕ್ಕೆ ಕಳುಹಿಸಲಾಗಿದೆ. ಪುರುಷರನ್ನು ಠಾಣೆಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಅಕ್ರಮ ವಲಸಿಗರನ್ನು ಬಾಂಗ್ಲಾ ಗಡಿಗೆ ಕರೆದುಕೊಂಡು ಹೋಗಿ ಬಿಡುತ್ತೇವೆ. ದೆಹಲಿ ಬಾಂಗ್ಲಾ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಿ ಗಡಿ ಭದ್ರತಾ ಪಡೆ ನೇತೃತ್ವದಲ್ಲಿ ರೈಲಿನ ಮೂಲಕ ಬಾಂಗ್ಲಾ ಮೂಲದವರನ್ನು ವಾಪಸ್ ಕಳುಹಿಸಿ ಕೊಡುತ್ತೇವೆ. ಬಾಂಗ್ಲಾದವರನ್ನು ಕರೆದುಕೊಂಡು ಬಂದವರ ಬೆನ್ನು ಹತ್ತುವುದು ನಮ್ಮ ಉದ್ದೇಶವಾಗಿದೆ ಎಂದರು.
ಐಬಿ, ಎನ್ಐಎ ಜೊತೆ ಸೇರಿಕೊಂಡು ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬಾಂಗ್ಲಾ ವಲಸಿಗರು ಭಯೋತ್ಪಾದಕರಿಗೆ ಸಹಾಯ ಮಾಡ್ತಿದ್ದಾರಾ ಎಂದು ಪರಿಶೀಲನೆ ನಡೆಸುತ್ತಿದ್ದೇವೆ. ಬಾಂಗ್ಲಾ ವಲಸಿಗರಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಕೊಟ್ಟು ಆಶ್ರಯ ನೀಡಿದವರ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಮನೆ ಕೊಡುವ ಮುಂಚೆ ದಾಖಲೆಗಳನ್ನು ಪರಿಶೀಲಿಸಿ ಕೊಡಬೇಕು ಎಂದು ಭಾಸ್ಕರ್ ರಾವ್ ಹೇಳಿದರು.