ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಯೊಂದರ ಮಾಹಿತಿ ಕದ್ದು ಕೋಟ್ಯಂತರ ರೂಪಾಯಿ ದೋಖಾ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಂಜಯ್‌ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಶಾಂತ್ ಎಂಬಾತ ಬಂಧಿತ ವ್ಯಕ್ತಿ. ಮೂಲತಃ ವಿಶಾಖಪಟ್ಟಣದನಾದ ಈತ ಡಿಜಿಎಂ ಕಂಪನಿಯ ನಿರ್ದೇಶಕನಾಗಿದ್ದಾನೆ.
ಏನಿದು ಪ್ರಕರಣ?:
ಮತ್ತಿಕೆರೆಯ ಬೆಂಗಳೂರು ಸ್ಮೈಲ್ ಆಸ್ಪತ್ರೆ ಜೊತೆ ಡಿಜಿಎಂ ಕಂಪೆನಿಯ ಎಂ. ಪ್ರಶಾಂತ್, ರಾಜೇಶ್ ರೆಡ್ಡಿ, ಶ್ರಾವಣಿ, ಯುವರಾಜ್, ಬಾಲಾಜಿ ನಾಡಿಗ್ ಆಸ್ಪತ್ರೆ ಜಾಲತಾಣ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣೆ ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ ಇ-ಮೇಲ್ ಐ.ಡಿ. ಜಾಲತಾಣಗಳ ಯೂಸರ್ ಐ.ಡಿ, ಪಾಸ್‌ವರ್ಡ್ ಸೇರಿದಂತೆ ಎಲ್ಲ ಮಾಹಿತಿ ನೀಡಲಾಗಿತ್ತು.
ಆರೋಪಿಗಳು ಸ್ಮೈಲ್ ಆಸ್ಪತ್ರೆಯ ಪ್ರಮುಖ ವೈದ್ಯ ಪರಮೇಶ್ವರ್ ಅವರ ಮೊಬೈಲ್ ನಂಬರ್ ಅನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿ, ಮಹತ್ವದ ಮಾಹಿತಿಗಳನ್ನು ಅಳಿಸಿ, ಆರೋಪಿ ರಾಜೇಶ್ ರೆಡ್ಡಿ ಮೊಬೈಲ್ ನಂಬರ್ ನಮೂದಿಸಿದ್ದರು. ಆ ನಂಬರ್‌ಗೆ ರೋಗಿಗಳು ಕರೆ ಮಾಡಿದಾಗ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಸುಳ್ಳು ಹೇಳಿ, ರೋಗಿಗಳ ಬಳಿ ಚಿಕಿತ್ಸೆ ಹಣ ಪಡೆಯುತ್ತಿದ್ದರು.
ಆರೋಪಿಗಳು ನಡೆಸಿದ ಈ ಕೃತ್ಯದಿಂದಾಗಿ ಆಸ್ಪತ್ರೆಗೆ ಸುಮಾರು 60 ಕೋಟಿಯಷ್ಟು ನಷ್ಟ ಆಗಿದೆ ಎನ್ನಲಾಗಿದೆ. ವಿಷಯ ತಿಳಿದ ವೈದ್ಯ ಪರಮೇಶ್ವರ್ ಡಿಜಿಎಂ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ನನ್ನು ಪೊಲೀಸರು ಬಂಧಿಸಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.