ಬೆಂಗಳೂರು : ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಪ್ರತಿಭಟನಾ ಸಭೆ ನೆಡೆಯಿತು. ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಯನ್ನು ವಿರೂಪಗೊಳಿಸಲಾಗಿದೆ. ತಿರುಚಿ ವಿಕೃತಿ ಮೆರೆಯಲಾಗಿದೆ ಎಂದು ಫ್ರೀಡಂಪಾರ್ಕ್ನಲ್ಲಿ ಆರ್ಎಸ್ಎಸ್ ಚಡ್ಡಿ ಸುಡಲು ಪ್ರತಿಭಟನಾಕಾರರು ಸಭೆಯ ಮಧ್ಯ ಮುಂದಾದರು.
ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಯತ್ನಿಸಿದರು. ಆದರೆ, ಪೊಲೀಸರ ಮಾತನ್ನು ಮೀರಿ ಚಡ್ಡಿ ಸುಟ್ಟು ಹಾಕಿದ ಪ್ರತಿಭಟನಾಕಾರರು ತಡೆಯಲು ಬಂದಿದ್ದಕ್ಕೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆರ್ಎಸ್ಎಸ್ ಚಡ್ಡಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಪೊಲೀಸರ ವಿರುದ್ಧವೂ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಬ್ರಾಹ್ಮಣರ ವಿಷಯಗಳನ್ನೇ ಪಠ್ಯಗಳಲ್ಲಿ ಆಳವಡಿಸಲಾಗಿದೆ : ಪ್ರೊ.ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಸಮಿತಿಯ ಪಠ್ಯಗಳಲ್ಲಿದ್ದ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಮಹಿಳಾ ಲೇಖಕರ, ಕವಿಗಳ ಪಾಠಗಳನ್ನು ಚಕ್ರತೀರ್ಥ ನೇತೃತ್ವ ಸಮಿತಿ ತೆಗೆದು ಹಾಕಿದೆ. ಕೇವಲ ಬ್ರಾಹ್ಮಣರ ವಿಷಯಗಳನ್ನೇ ಪಠ್ಯಗಳಲ್ಲಿ ಅಳವಡಿಸಲಾಗಿದೆ. ಉಳಿದಂತೆ ಅನೇಕ ಮಹನೀಯರಿಗೆ ಅವಮಾನಕರವಾಗುವ ರೀತಿಯಲ್ಲಿ ಸಮಿತಿ ನಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಡಿಸಿದರು.
ದ್ವೇಷಪೂರಿತ ಪಠ್ಯಗಳನ್ನು ಮಕ್ಕಳ ತಲೆಗೆ ತುಂಬಲು ಪ್ರಯತ್ನ: ದ್ವೇಷಪೂರಿತ ಪಠ್ಯಗಳನ್ನು ಮಕ್ಕಳ ತಲೆಗೆ ತುಂಬಲು ಪ್ರಯತ್ನ ನೆಡೆದಿದೆ. ಪಠ್ಯ ಪರಿಷ್ಕರಣಾ ಸಮಿತಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಕುವೆಂಪು, ಬುದ್ಧ, ಮಹಾವೀರ, ವಾಲ್ಮೀಕಿ, ಸಾವಿತ್ರಿಭಾಯಿ ಪುಲೆ, ರಾಮಸ್ವಾಮಿ, ನಾರಾಯಣಗುರು, ಸಂಗೊಳ್ಳಿ ರಾಯಣ್ಣ, ಕನಕದಾಸರು, ಅಕ್ಕಮಹಾದೇವಿ, ಟಿಪ್ಪು ಸುಲ್ತಾನ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರುಗಳ ಪಠ್ಯಗಳನ್ನು ಇತಿಹಾಸಕ್ಕೆ ಚ್ಯುತಿ ಬರದಂತೆ ಅಳವಡಿಸಬೇಕೆಂದು ಚಡ್ಡಿ ಸುಟ್ಟು ಆಕ್ರೋಶ ಹೊರ ಹಾಕಿದರು.
ಚಕ್ರತೀರ್ಥನನ್ನ ಬಂಧಿಸಿ, ಪರಿಷ್ಕೃತ ಪಠ್ಯ ವಾಪಸ್ ಪಡೆಯಲು ಹಕ್ಕೊತ್ತಾಯ : ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರನ್ನು ದೇಶದ್ರೋಹ ಹಾಗೂ ನಾಡದ್ರೋಹದ ಕಾನೂನಿನ ಅಡಿ ದೂರು ದಾಖಲಿಸಿ ಬಂಧಿಸಬೇಕು ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜೀನಾಮೆ ನೀಡಬೇಕು. ಪರಿಷ್ಕೃತ ಪಠ್ಯವನ್ನು ಶಾಲೆಗಳಿಗೆ ಸರಬರಾಜು ಮಾಡಬಾರದು. ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು.
ಇನ್ನು ಹಳೆ ಪಠ್ಯವನ್ನೇ ಮುಂದುವರಿಸುವಂತೆ ಪಠ್ಯ ವಿರೋಧಿ ಪ್ರತಭಟನಾ ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು. ಕುವೆಂಪು ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಕ್ಕೊತ್ತಾಯ ಮಂಡಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಕುವೆಂಪು ಹೋರಾಟ ಸಮಿತಿಯ ಅಧ್ಯಕ್ಷ ಜಿ.ಬಿ ಪಾಟೀಲ್ ಹಕ್ಕೊತ್ತಾಯ ಮಂಡಿಸಿದರು.
ಹಕ್ಕೊತ್ತಾಯ ಸ್ವೀಕರಿಸಲು ಸರ್ಕಾರ ನಕಾರ, ಹೆಚ್‌ಡಿಡಿ ಮೂಲಕ ಮನವಿಗೆ ನಿರ್ಧಾರ : ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದ ಹಕ್ಕೊತ್ತಾಯದ ನಿರ್ಣಯದ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಬೇಕು ಎಂಬ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಯೊಬ್ಬರು, ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಬೇಕು ಎಂಬ ಬೇಡಿಕೆ ಇರುವುದರಿಂದ ಸ್ಥಳಕ್ಕೆ ಬರುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ನಂಜಾವಧೂತ ಸ್ವಾಮೀಜಿ ಮತ್ತು ಹೆಚ್.ಡಿ. ದೇವೇಗೌಡ ಅವರಿಗೆ ಮಾಹಿತಿ ನೀಡಿದರು.
ಈ ವಿಷಯವನ್ನು ಪ್ರಕಟಿಸಿದ ನಂಜಾವಧೂತ ಸ್ವಾಮೀಜಿ, ಮನವಿಪತ್ರವನ್ನು ದೇವೇಗೌಡ ಅವರ ಮೂಲಕ ಸರ್ಕಾರಕ್ಕೆ ಕಳುಹಿಸುವ ತೀರ್ಮಾನ ಪ್ರಕಟಿಸಿದರು. ಬಳಿಕ ವೇದಿಕೆಯಲ್ಲಿದ್ದ ಮಠಾಧೀಶರು, ರಾಜಕೀಯ ಮುಖಂಡರು, ಬರಹಗಾರರು ಮತ್ತು ಹೋರಾಟಗಾರರು ಮನವಿ ಪತ್ರವನ್ನು ದೇವೇಗೌಡರಿಗೆ ನೀಡಿದರು. ನಗರದ ವಿವಿಧ ಭಾಗಗಳಿಂದ ರೋಹಿತ್ ಚಕ್ರತೀರ್ಥ ಅಧ್ಯಕ್ಷರಾಗಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ವಿರುದ್ಧ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರ ಜೊತೆ ಕೆಂಪೇಗೌಡ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಂದೆಡೆ ರ್‍ಯಾಲಿಗೆ ಸಿದ್ಧತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಮೆರವಣಿಗೆ ನಡೆಸದಂತೆ ಪೊಲೀಸರು ಮನವಿ ಮಾಡುವುದು ಕಂಡು ಬಂದಿತು. ಪ್ರತಿಭಟನೆಗೆ ಅವಕಾಶ ಇದೆ. ಆದರೆ, ರ್‍ಯಾಲಿಗೆ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಲು ಯತ್ನಿಸಿದರು. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಗೆ ಮಾತ್ರ ಅವಕಾಶ ಇರುವುದಾಗಿ ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದಾರೆ. ಪಠ್ಯ ಪುಸ್ತಕ ಕೇಸರಿಕರಣ ವಿರೋಧಿಸಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ನಾಡಿನ ಹಲವು ಭಾಗದಿಂದ ಚಿಂತಕರು, ಸಾಹಿತಿಗಳು, ದಲಿತ ಸಂಘಟನೆಗಳ ಸದಸ್ಯರು, ಸಾಹಿತಿಗಳು, ಕಾರ್ಮಿಕ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಸ್ವಾಮೀಜಿಗಳು, ಒಕ್ಕಲಿಗರ ನೌಕರರ ಸಂಘ, ಕನ್ನಡಪರ ಹೋರಾಟಗಾರರು, ಹಂಸಲೇಖಾ, ಸಿ.ಎಸ್.ದ್ವಾರಕನಾಥ್, ಎ.ಪಿ.ರಂಗನಾಥ್, ಪ್ರವೀಣ್ ಶೆಟ್ಟಿ, ಅಕೈ ಪದ್ಮಶಾಲಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ : ಮದುವೆಯಾಗಲು ನಮಗೆ ಅವಕಾಶ ನೀಡಿ: ಸಲಿಂಗಿಗಳಿಂದ ಬೃಹತ್ ರ್‍ಯಾಲಿ