ಬೆಂಗಳೂರು : ಬೆಂಗಳೂರಿಗರ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಯೋಜನೆ ಉಪನಗರ ರೈಲು ಯೋಜನೆ. ಈ ಯೋಜನೆ ಘೋಷಣೆಯಾಗಿ ವರ್ಷಗಳೇ ಕಳೆದಿವೆ. ಇದೀಗ ಕಾರ್ಯರೂಪಕ್ಕೆ ಬರುವ ಹಂತದಲ್ಲಿದೆ. ಯೋಜನೆ ಅನುಷ್ಠಾನಕ್ಕೆ ಚಾಲನೆ ಸಿಕ್ಕಿದ್ದರೂ, ಪ್ರಗತಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಸದ್ಯ ಯೋಜನೆ ಅನುಷ್ಠಾನ ಆರಂಭಿಕ ಟೆಂಡರ್ ಪ್ರಕ್ರಿಯೆಯಲ್ಲಿದೆ.
15,700 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ
ಸುಮಾರು 15,700 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ನಾನಾ ಸವಾಲುಗಳು ಎದುರಾಗಿದ್ದವು. ಹಣಕಾಸು ಪಾಲು, ಕೇಂದ್ರದ ಜತೆ ಸಮನ್ವಯತೆ. ವಿವಿಧ ಅನುಮತಿ, ಡಿಪಿಆರ್, ಪರಿಷ್ಕೃತ ಡಿಪಿಆರ್, ಭೂಸ್ವಾಧೀನ, ಸಾಲದ ಮೊತ್ತ ಹೀಗೆ ಹತ್ತು-ಹಲವು ಸುದೀರ್ಘ ಪ್ರಕ್ರಿಯೆಗಳ ಬಳಿಕ ಇದೀಗ ಯೋಜನೆ ಅನುಷ್ಠಾನದ ಹಂತ ತಲುಪಿದೆ. ಎಲ್ಲಾ ಅಡೆತಡೆಗಳನ್ನು ದಾಟಿ ಯೋಜನೆ ಜಾರಿಗೆ ಒತ್ತಡ ತೀವ್ರಗೊಂಡ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡೆಗೂ ಇಚ್ಛಾಶಕ್ತಿ ಪ್ರದರ್ಶಿಸಿವೆ.
ಸಬ್ ಅರ್ಬನ್ ಯೋಜನೆಯಿಂದ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಯಾಗುವುದರ ಜತೆಗೆ ನಗರ ಹೊರವಲಯದ ಉಪನಗರ ಸಾರಿಗೆ ಸಂಪರ್ಕ ಸುಲಭವಾಗಲಿದೆ. ಯೋಜನೆ ಅನುಷ್ಠಾನದ ಕಾಮಗಾರಿ ಅಧಿಕೃತವಾಗಿ ಇನ್ನೂ ಆರಂಭವಾಗಿಲ್ಲ. ಆದರೆ, ಆರಂಭಿಕ ಪ್ರಕ್ರಿಯೆಗಳು ಆಮೆಗತಿಯಲ್ಲಿ ಸಾಗುತ್ತಿದೆ.
ಉಪನಗರ ರೈಲು ಯೋಜನೆ ವಿಶೇಷತೆ ಏನು?:
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಪಿಪಿಪಿ ಮಾದರಿಯಡಿ 15,767 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. 148.17 ಕಿ.ಮೀ. ವೆಚ್ಚದಲ್ಲಿ ನಾಲ್ಕು ಪ್ರತ್ಯೇಕ ಕಾರಿಡಾರ್ಗಳನ್ನು ಈ ಯೋಜನೆ ಹೊಂದಿರಲಿದೆ.
ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನ್ ಮೆಂಟ್ (35.52 ಕಿ.ಮೀ.) ಮತ್ತು ಹೀಲಲಿಗೆ-ರಾಜನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್‌ನಲ್ಲಿ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ.
ಯೋಜನೆಯಡಿ 62 ನಿಲ್ದಾಣಗಳು, ಎಲಿವೇಟೆಡ್ ಮಾರ್ಗ 22 ಹಾಗೂ at grade 40 ಹೊಂದಿರಲಿದೆ. ಎಲಿವೇಟೆಡ್ ಮಾರ್ಗ 55.57 ಕಿ.ಮೀ ಇದ್ದರೆ, at grade 75.55 ಕಿ.ಮೀ + 17.05 ಕಿ.ಮೀ ಉದ್ದ ಇರಲಿದೆ. 101.7 ಎಕರೆ ಖಾಸಗಿ ಭೂಮಿಯ ಅವಶ್ಯಕತೆ ಇದೆ. ಇದರ ಸ್ವಾಧೀನಕ್ಕಾಗಿ 1,419 ಕೋಟಿ ರೂ. ವೆಚ್ಚವಾಗಲಿದೆ. 2026ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಯೋಜನಾ ವೆಚ್ಚ ಹಂಚಿಕೆ, ಬಿಡುಗಡೆಯಾದ ಹಣ ಎಷ್ಟು?:
20:20:60 (ರಾಜ್ಯ:ಕೇಂದ್ರ:ಸಾಲ)ದಲ್ಲಿ ವೆಚ್ಚ ಹಂಚಿಕೆಯಾಗಲಿದೆ. ಯೋಜನೆಗೆ ಕರ್ನಾಟಕ ಸರ್ಕಾರ 5,087 ಕೋಟಿ, ಭಾರತ ಸರ್ಕಾರ 3242 ಕೋಟಿ ಹಾಗೂ ಸಾಲದ ಮೂಲಕ 7,438 ಕೋಟಿ ರೂ. ಭರಿಸಲಿದೆ.
2021-22ನೇ ಸಾಲಿನಲ್ಲಿ ಯೋಜನೆಗಾಗಿ ಕೇಂದ್ರ ಸರ್ಕಾರ 300 ಕೋಟಿ ರೂ. ಆನುದಾನ ಹಂಚಿಕೆ ಮಾಡಿದೆ. ಕರ್ನಾಟಕ ಸರ್ಕಾರ 590 ಕೋಟಿ ರೂ. ಹಂಚಿಕೆ ಮಾಡಿದೆ. ಕರ್ನಾಟಕ ಸರ್ಕಾರದಿಂದ ಈವರೆಗೆ 400 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಯೋಜನೆಯ ಸಾಲ ಎತ್ತುವಳಿಗಾಗಿ ಈಗಾಗಲೇ ಕೇಂದ್ರ ಸರ್ಕಾರದ DEAಯಿಂದ ಅಗತ್ಯ ಅನುಮೋದನೆ ಪಡೆಯಲಾಗಿದೆ. ಇದರ ಜತೆಗೆ ಜರ್ಮನ್ ಸರ್ಕಾರದ KFW ಸಂಸ್ಥೆ 500 ಮಿಲಿಯನ್ ಯುರೋ ಮತ್ತು ಫ್ರೆಂಚ್ ಮೂಲದ AFD ಸಂಸ್ಥೆ 300 ಮಿಲಿಯನ್ ಯುರೋ ಸಾಲದ ನೆರವು ನೀಡಲಿದೆ.
ಸದ್ಯ ಟೆಂಡರ್ ಪ್ರಕ್ರಿಯೆಯಲ್ಲಿ ಯೋಜನೆ : ಸದ್ಯ ಯೋಜನೆ ಅನುಷ್ಠಾನ ಟೆಂಡರ್ ಪ್ರಕ್ರಿಯೆಯಲ್ಲಿದೆ. ಅಧಿಕೃತವಾಗಿ ಕಾಮಗಾರಿಗಳು ಪ್ರಾರಂಭವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರಿಡಾರ್ 2 ಮತ್ತು 4ರಲ್ಲಿ ಆರಂಭಿಕ ಕಾಮಗಾರಿಗಳಾದ ಅಲೈನ್ಮೆಂಟ್ ಅಂತಿಮಗೊಳಿಸುವ ಕಾರ್ಯ, ಭೂಸ್ವಾಧೀನ ಕಾರ್ಯ, ಯುಟಿಲಿಟಿ ಸ್ಥಳಾಂತರ ಗುರುತಿಸುವಿಕೆ ಕಾರ್ಯ, ಮಣ್ಣು ಪರೀಕ್ಷೆ ಮತ್ತು ವಿವಿಧ ನಿರ್ಮಾಣ ಕಾರ್ಯಗಳಿಗಾಗಿ ವಿನ್ಯಾಸ ರಚನೆ ರೂಪಿಸಲಾಗುತ್ತಿದೆ.
ಈ ಸಂಬಂಧ ಟೆಂಡರ್ ಪ್ರಕ್ರಿಯೆ ಸಿದ್ಧಪಡಿಸಲಾಗಿದೆ. ಕಾರಿಡಾರ್-2 ಮತ್ತು 4 ರಲ್ಲಿ ಲೆವೆಲ್ ಕ್ರಾಸಿಂಗ್ ನಿರ್ಮೂಲನೆಗಾಗಿ ಯೋಜನೆ ಮತ್ತು ಆ ಸಂಬಂಧ ಸಮೀಕ್ಷೆಯನ್ನು ಮಾಡಲಾಗಿದೆ. ಈ ಬಗ್ಗೆ ಟೆಂಡರ್ ಆಹ್ವಾನಿಸಲಾಗಿದೆ. ಈ ಯೋಜನೆಯ ತುರ್ತು ಅನುಷ್ಠಾನಕ್ಕಾಗಿ ಇದೇ ಆಗಸ್ಟ್ ರಂದು ಹಂತ-1ರಲ್ಲಿ ಕಾರಿಡಾರ್ 2 ಮತ್ತು 4 ಕಾರಿಡಾರ್ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಅದೇ ರೀತಿ ಹಂತ 2ರಲ್ಲಿ ಕಾರಿಡಾರ್-1 ಮತ್ತು 3ರ ಅನುಷ್ಠಾನದ ಪ್ರಾರಂಭಿಕ ಹಾಗೂ ಇತರೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರಿಡಾರ್ -2ರಲ್ಲಿ ಭೂ ಸ್ವಾಧೀನ ಕಾರ್ಯ ಪ್ರಗತಿಯಲ್ಲಿದ್ದರೆ, ಕಾರಿಡಾರ್ 4ರಲ್ಲಿ ಭೂ ಸ್ವಾಧೀನಕ್ಕಾಗಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿಗೆ 7,795 ಕೋಟಿ ರೂ.: ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ. ಮೀಸಲು