ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಶಿಕ್ಷಕರ ಕೌನ್ಸಿಂಗ್ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಇನ್ನು ವರ್ಗಾವಣೆ ಸಂಬಂಧ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತು ಅನೇಕ ಶಿಕ್ಷಕರು, ಅದರಲ್ಲಿಯೂ ಶಿಕ್ಷಕಿಯರು ಮನವಿ ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಕೆಲವು ನ್ಯಾಯಯುತ ಪ್ರಸ್ತಾವನೆಗಳನ್ನು ನನ್ನ ಮುಂದೆ ಇಟ್ಟಿದ್ದಾರೆ. ಈ ವರ್ಗಾವಣೆ ವ್ಯವಸ್ಥೆಯಲ್ಲಿರುವ ಕೆಲ ದೋಷಗಳನ್ನೂ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಈ ಕೆಲವು ಗೊಂದಲಗಳನ್ನು ನಿವಾರಿಸಿ, ಎಲ್ಲರಿಗೂ ಅನುಕೂಲವಾಗುವ ರೀತಿಯ ವ್ಯವಸ್ಥೆ ಕುರಿತು ಚಿಂತನೆ ಮತ್ತು ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೇವಲ ಕೆಲದಿನಗಳ ಮಟ್ಟಿಗೆ ಹಾಲಿ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಬಹಳ ಬೇಗ ಸುಧಾರಿತ ವರ್ಗಾವಣೆ ಪ್ರಕ್ರಿಯೆ ಜಾರಿ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಯಾರಿಗೂ ಆತಂಕ ಬೇಡ ಅಂತ ತಿಳಿಸಿದ್ದಾರೆ. ಪರಸ್ಪರ ವರ್ಗಾವಣೆ ಕುರಿತು ಗೊಂದಲ, ಭಿನ್ನಾಭಿಪ್ರಾಯ ಇರದಿರುವುದರಿಂದ ಅದನ್ನು ಕೂಡಲೇ ಮುಂದುವರಿಸಬಹುದಾಗಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿರುವುದರಿಂದ ಈ ಕುರಿತು ಕೂಡಲೇ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ಶಿಕ್ಷಕರ ದಿನಾಚರಣೆಯಂದು ಅತ್ಯುತ್ತಮ ಕನ್ನಡ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮಾಜಿ ಶಿಕ್ಷಣ ಸಚಿವ ದಿವಂಗತ ಹೆಚ್.ಜಿ.ಗೋವಿಂದೇಗೌಡ ಅವರ ಹೆಸರಿನಲ್ಲಿ ನೀಡಲಾಗುವ ರಾಜ್ಯ ಪ್ರಶಸ್ತಿ ಆಯ್ಕೆಗೆ ಬುಧವಾರ ಸಭೆ ನಡೆಸಲಾಯಿತು. ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ಬಹಳಷ್ಟು ಚರ್ಚೆ ಮತ್ತು ಪರಾಮರ್ಶೆ ನಡೆಸಲಾಗಿದ್ದು, ಈ ಪ್ರಶಸ್ತಿಗೆ ಬೆಳಗಾವಿ ವಿಭಾಗದ ಎರಡು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಒಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂದು ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಲಾಗಿದೆ. ಇನ್ನು ಈ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.