ಬೆಂಗಳೂರು: ನಗರದ ಬೆಳ್ಳಂದೂರು ಕೆರೆ ಸಮೀಪದ ಕರಿಯಮ್ಮನ ಅಗ್ರಹಾರ ವ್ಯಾಪ್ತಿಯ ಕೊಳಚೆ ಪ್ರದೇಶದ ಜನರಿಗೆ ಆಹಾರ ಹಾಗೂ ಇತರ ಮೂಲಸೌಕರ್ಯಗಳ ಕಲ್ಪಿಸುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ತಾಕೀತು ಮಾಡಿದೆ.
ಅಕ್ರಮ ಬಾಂಗ್ಲಾ ವಲಸಿಗರು ವಾಸಿಸುತ್ತಿದ್ದಾರೆಂಬ ಆರೋಪದ ಮೇಲೆ ಕರಿಯಮ್ಮನ ಅಗ್ರಹಾರದ ವ್ಯಾಪ್ತಿಯ ಕೊಳೆಗೇರಿ ಪ್ರದೇಶಗಳಲ್ಲಿದ್ದ ಬಿಡಾರಗಳನ್ನು ಮೂರು ತಿಂಗಳ ಹಿಂದೆ ಬಿಬಿಎಂಪಿ ತೆರವುಗೊಳಿಸಿತ್ತು. ನಂತರ ಹೈಕೋರ್ಟ್ ಆದೇಶದ ಮೇರೆಗೆ ಅವರಿಗೆ ತಾತ್ಕಾಲಿಕ ಪರಿಹಾರವಾಗಿ ಶೆಡ್ ನಿರ್ಮಾಣ ಮಾಡಿಕೊಡಲಾಗಿದೆ. ಸದ್ಯ ಅಲ್ಲಿನ ನಿವಾಸಿಗಳ ಪರಿಸ್ಥಿತಿ ತೀರ ಕೆಟ್ಟದಾಗಿದ್ದು, ನಿತ್ಯದ ಊಟಕ್ಕೂ ಪರದಾಡುತ್ತಿದ್ದಾರೆ.
ಜತೆಗೆ ಮೂಲಸೌಕರ್ಯಗಳಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಸಣ್ಣ ಮಕ್ಕಳಿಗೆ ಹಾಲು ಕೂಡ ದೊರೆಯುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಮಾಧ್ಯಮಗಳ ವರದಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಬಿಬಿಎಂಪಿ ಮತ್ತು ಸರ್ಕಾರ ಈ ವಿಚಾರದಲ್ಲಿ ಕೂಡಲೇ ಗಮನಹರಿಸಬೇಕು.
ಕರಿಯಮ್ಮನ ಅಗ್ರಹಾರ ವ್ಯಾಪ್ತಿ ಸೇರಿದಂತೆ ನಗರದ ಕೊಳೆಗೇರಿಗಳಲ್ಲಿರುವ ನಿವಾಸಿಗಳಿಗೆ ಆಹಾರ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅಧಿಕಾರಿಗಳು ಕೈಗೊಂಡ ಪರಿಹಾರ ಕ್ರಮಗಳ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.