ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತಿನ ಚಕಮಕಿ ನಡೆದಿದೆ.
ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಕಳೆದ ನಾಲ್ಕು ದಿನಗಳಿಂದ ತಮ್ಮ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು ಮುಖಂಡರ ಸಭೆ ನಡೆಸುತ್ತಿದ್ದು, ಅದೇ ರೀತಿ ಇಂದಿನ ಸಭೆಗೆ ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿದ್ದರು. ಸಭೆ ಮುಗಿದ ಬಳಿಕ ಹೊರ ಬಂದ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಹೊತ್ತು ಯಾರು, ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗಿಲ್ಲ. ಆಗ ಸ್ಥಳದಲ್ಲೇ ಇದ್ದ ಪೊಲೀಸರು ಮುಖಂಡರನ್ನು ಸಮಾಧಾನಪಡಿಸಿದರು.
ಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೊಳಲ್ಕೆರೆ ಜೆಡಿಎಸ್ ತಾಲೂಕು ಅಧ್ಯಕ್ಷ ಶೇಖರ್ ವಿರುದ್ಧ ಮುಖಂಡ ವೆಂಕಟೇಶ್ ಎಂಬುವರು ತಮ್ಮ ಅಸಮಧಾನ ಹೊರಹಾಕಿದರು. ತಾಲೂಕಿನಲ್ಲಿ ಪಕ್ಷ ಸಂಘಟನೆಯಾಗಿಲ್ಲ. ಅಧ್ಯಕ್ಷರಾಗಿ ಏನೂ ಕೆಲಸ ಮಾಡಿಲ್ಲ. ಈ ಬಗ್ಗೆ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಆಗ ಎರಡೂ ಕಡೆ ಕಾರ್ಯಕರ್ತರು ವಾಗ್ವಾದ ನಡೆಸಿದರು. ತಾಲೂಕು ಬಿಟ್ಟು, ಬೆಂಗಳೂರು ಸೇರಿಕೊಂಡಿದ್ದಿಯಾ. ತಾಲೂಕಿಗೆ ಬಂದು ಪಕ್ಷದ ಕೆಲಸ ಮಾಡು ಎಂದು ವೆಂಕಟೇಶ್ ವಿರುದ್ಧ ಶೇಖರ್ ಕಿಡಿಕಾರಿದರು.