ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ, ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಪರಿಸ್ಥಿತಿ ಸುಧಾರಿಸುವವರೆಗೆ ಕನ್ನಡಕ ಬಳಸಿ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ಖ್ಯಾತ ನೇತ್ರಶಾಸ್ತ್ರಜ್ಞ ಕೆ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.
ಒಂದು ದಿನದಲ್ಲಿ ಮನುಷ್ಯ ತಮ್ಮ ಮುಖ, ಕಣ್ಣು ಒಂದು ಗಂಟೆಗೆ ಸುಮಾರು 20 ಬಾರಿ ತಿಳಿಯದೇ ಸ್ಪರ್ಷಿಸುತ್ತಾರೆ. ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರು ತಮ್ಮ ಕಣ್ಣು ಮುಖವನ್ನ ಆಗಾಗ್ಗೆ ಸ್ಪರ್ಷಿಸುವುದರಿಂದ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಕಣ್ಣಿನ ಕನ್ನಡಕ ಬದಲಾಯಿಸುವುದು ಸೂಕ್ತ ಎಂದಿದ್ದಾರೆ.
ವೈರಸ್ ಕಣ್ಣುಗಳ ಮೂಲಕವೂ ದೇಹವನ್ನು ಪ್ರವೇಶಿಸಬಹುದು ಎಂದು ಹಲವರಿಗೆ ತಿಳಿದಿಲ್ಲ. ಕನ್ನಡಕವನ್ನ ಬಳಸುವುದರಿಂದ ವೈರಸ್ ಹನಿಗಳು ನಿಮ್ಮ ಕಣ್ಣುಗಳೊಂದಿಗೆ ಸಂಪರ್ಕಕ್ಕೆ ಬರದಂತೆ ತಡೆಯುವ ಮೂಲಕ ಕೊರೊನಾ ವೈರಸ್‌ನಿಂದ ರಕ್ಷಿಸುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಮನೆಗಳಿಂದ ಹೊರಬಂದಾಗ ಕನ್ನಡಕವನ್ನ ಹೆಚ್ಚುವರಿ ರಕ್ಷಣಾ ಸಾಧನವಾಗಿ ಧರಿಸಬೇಕು.
ವೈರಸ್‌ನಿಂದ ತೀವ್ರವಾಗಿ ತತ್ತರಿಸಿರುವ ಯುಎಸ್‌ನಲ್ಲಿ, ಅಮೆರಿಕನ್ ಅಕಾಡೆಮಿ ಆಫ್ ನೇತ್ರ ವಿಜ್ಞಾನವು ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರನ್ನ ಕನ್ನಡಕಕ್ಕೆ ಬದಲಾಯಿಸಲು ಶಿಫಾರಸು ಮಾಡಿದೆ ಮೂಲಗಳಿಂದ ತಿಳಿದು ಬಂದಿದೆ.