ದೊಡ್ಡಬಳ್ಳಾಪುರ: ಸ್ನಾನಗೃಹದಲ್ಲಿ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಹಾಲಿನ ಡೈರಿ ಹಿಂಭಾಗದಲ್ಲಿ ನಡೆದಿದೆ.
ಅಶೋಕ್ (23) ಸಾವನ್ನಪ್ಪಿದ ಯುವಕ. ಬಿರಿಯಾನಿ ಸೆಂಟರ್ ನಡೆಸುತ್ತಿದ್ದ ಈತ ಇಂದು ಬೆಳಗ್ಗೆ ಸ್ನೇಹಿತನ ಮನೆಗೆ ಬಂದಿದ್ದಾನೆ. ಈ ವೇಳೆ ಸ್ನಾನಕ್ಕೆಂದು ಹೋಗಿದ್ದು ಬಾತ್ರೂಮ್ನಲ್ಲೇ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಸ್ನಾನಗೃಹದಿಂದ ಹೊರಗೆ ಬಾರದೇ ಇದ್ದುದನ್ನು ಗಮನಿಸಿ, ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಅಶೋಕ್ ಸಾವನ್ನಪ್ಪಿರುವುದು ಗೊತ್ತಾಗಿದೆ.
ಗೀಸರ್ನಿಂದ ಅನಿಲ ಸೋರಿಕೆಯಾಗಿ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.