ಬೆಂಗಳೂರು: ಸರ್ಕಾರಿ ಶಾಲೆಗಳ ಪ್ರಗತಿಗೆ ಅಗತ್ಯ ಕ್ರಮ ಕೈಗೊಂಡು ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಸರದಿ ಸಾಲಿನಲ್ಲಿ ನಿಲ್ಲಬೇಕು ಅಂತಹ ಸ್ಥಿತಿ ನಿರ್ಮಿಸುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಸರದಿ ನಿಲ್ಲಬೇಕು ಅಂತಹ ಸ್ಥಿತಿ ನಿರ್ಮಿಸುತ್ತೇವೆ. ಸರ್ಕಾರಿ ಶಾಲಾ ಮಕ್ಕಳು ಕಲಿಯಲು ಕೀಳರಿಮೆ ಪಡುವ ಅಗತ್ಯವಿಲ್ಲ. ಸರ್ಕಾರವೇ ಪ್ರತಿ ಎರಡು ಶನಿವಾರಕ್ಕೆ ಒಮ್ಮೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿವೆ ಎಂದರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ತಮ್ಮ ಪ್ರಶ್ನೆಯಲ್ಲಿ ಸರ್ಕಾರಿ ಶಾಲೆ ಅರ್ಹ ಅತಿಥಿ ಉಪನ್ಯಾಸರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ, ಕೃಪಾಂಕ ನೀಡಲು ಸರ್ಕಾರ ಮುಂದಾಗಬೇಕು ಎಂದರು.
ಸಚಿವ ಹಾಗೂ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಮಾತನಾಡಿ, ಸರ್ಕಾರ ಈ ಬಗ್ಗೆ ಪರಿಶೀಲಿಸಲಿದೆ ಎಂದು ಉತ್ತರಿಸಿದರು. ಆದರೆ ಉತ್ತರಕ್ಕೆ ಸಮಾಧಾನಪಡದ ಮರಿತಿಬ್ಬೇಗೌಡರು ಸ್ಪಷ್ಟತೆ ಬೇಕು ಎಂದರು. ಇವರ ಸಮಸ್ಯೆಗೆ ಸ್ಪಂದಿಸಬೇಕೆಂದು ಆಡಳಿತ ಪಕ್ಷದ ಸದಸ್ಯರಾದ ಆಯನೂರು ಮಂಜುನಾಥ್ ಸೇರಿದಂತೆ ಹಲವು ಸದಸ್ಯರು ಕೂಡ ಬೆಂಬಲಿಸಿದರು. ಅವರ ವೇತನ ಹೆಚ್ಚಿಸಬೇಕೆಂದು ಮನವಿ ಮಾಡಿದರು. ಶಿಕ್ಷಣ ಇಲಾಖೆ ಅಧಿಕಾರಿಗಳ ಅನುಪಸ್ಥಿತಿಯ ಬಗ್ಗೆ ಚರ್ಚಿಸಿದರು. ಬಿಜೆಪಿ ಸದಸ್ಯ ಅರುಣ್ ಶಹಾಪುರ್ ಮಾತನಾಡಿ, ಉಪನ್ಯಾಸಕರು 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈಗಲೂ ಅವರು ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರನ್ನು ಕಾಯಂಗೊಳಿಸಬೇಕು, ಸೂಕ್ತ ವೇತನ ನಿಗದಿಪಡಿಸಬೇಕೆಂದರು. ಸದಸ್ಯ ಪುಟ್ಟಣ್ಣ ಮಾತಿಗಿಳಿದಾಗ ಸದಸ್ಯರೆಲ್ಲಾ ಅವಕಾಶ ನೀಡಬಾರದು, ಅವರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಇದರಿಂದ ಶೇ.51 ರಷ್ಟು ಆಡಳಿತ ಪಕ್ಷ ಹಾಗೂ ಶೇ.49 ರಷ್ಟು ಪ್ರತಿಪಕ್ಷದತ್ತ ಇದ್ದಾರೆ ಎಂದು ಮರಿತಿಬ್ಬೇಗೌಡರು ಹಾಸ್ಯ ಚಟಾಕಿ ಹಾರಿಸಿದರು.
ಪುಟ್ಟಣ್ಣ ಹಾಗೂ ಭೋಜೇಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆ ಬಿಚ್ಚಿಟ್ಟರು. ಉತ್ತರ ನೀಡಿದ ಸಚಿವ ಡಾ. ಅಶ್ವತ್ಥ ನಾರಾಯಣ, ಶಿಕ್ಷಕರ ಸ್ಥಿತಿ ಬೇಸರ ತರಿಸುತ್ತಿದೆ. ಉದ್ಯೋಗ ಭದ್ರತೆ ಇಲ್ಲದೇ ಸಮಸ್ಯೆ ಹೆಚ್ಚಾಗಿದೆ. 12 ರಿಂದ 16 ಸಾವಿರ ಮಂದಿ ಇದ್ದಾರೆ. 1,240 ಹೊಸ ಪೋಸ್ಟ್ಗೆ ಕಾಲ್ಫಾರ್ಮ್ ಮಾಡಿದ್ದೇವೆ. ಪ್ರತಿಭೆ ಆಧಾರದ ಮೇಲೆ ಇದೇ ಅತಿಥಿ ಉಪನ್ಯಾಸಕರು ಆಯ್ಕೆಯಾಗಲಿದ್ದಾರೆ. ಇವರಿಗೆ ಇನ್ನಷ್ಟು ಕಡೆ ಅವಕಾಶ ಕಲ್ಪಿಸಲು ಮುಂದಿನ ದಿನಗಳಲ್ಲಿ ಸಭೆ ಕರೆದು ಎಲ್ಲರ ಸಲಹೆ ವಿಶ್ವಾಸಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಅರಣ್ಯ ಒತ್ತುವರಿ ವಿಚಾರವನ್ನು ಪ್ರಸ್ತಾಪಿಸಿದರು. ಸಚಿವರ ಉತ್ತರ ಸೂಕ್ತ ಸಮಾಧಾನ ಸಿಕ್ಕಿಲ್ಲ, ಕಾಟಾಚಾರದ ಉತ್ತರವಾಗಿದೆ. ವಿಸ್ತಾರವಾದ ಉತ್ತರ ಬೇಕು ಎಂದರು. ಅರಣ್ಯ ಸಚಿವ ಆನಂದ್ ಸಿಂಗ್, ಅನುಬಂಧ ಎರಡರಲ್ಲಿ ನಾವು ಸೂಕ್ತ ವಿವರ ನೀಡಿದ್ದೇವೆ. ಅರಣ್ಯಭಾಗದಲ್ಲಿ ಮನೆ ನಿರ್ಮಿಸಿದ್ದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ್ದೀರಿ. ಇದಕ್ಕೆ ಅವಕಾಶವೇ ಇಲ್ಲ. ಆ ರೀತಿ ಮನೆ ನಿರ್ಮಾಣವಾಗಿದೆ ಎನ್ನಲಾಗಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಸಚಿವರ ಉತ್ತರ ಸಮರ್ಪಕವಾಗಿಲ್ಲ, ಕೊಡಗು ಜಿಲ್ಲೆ ವಿಚಾರವಾಗಿ ವಿವರ ಇಲ್ಲ, ಸಾಕಷ್ಟು ಗೊಂದಲ ಇದ್ದು, ಅರ್ಥವಾಗುತ್ತಿಲ್ಲ. ಒತ್ತುವರಿ ಸಂಬಂಧ ದಾಖಲೆ ಇಲ್ಲ ಎಂದು ಪ್ರತಿಪಕ್ಷ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಶಾಲಾ ಮೈದಾನ ಸಂಬಂಧ ಸದಸ್ಯ ಆರ್. ಧರ್ಮಸೇನ ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ನರೇಗಾ ಅಡಿ ಎಲ್ಲಾ ಕಡೆ ಮೈದಾನ ಕಲ್ಪಿಸುವ ಕಾರ್ಯ ಮಾಡುತ್ತೇವೆ. ಎಲ್ಲಾ ಶಾಲೆಗಳಲ್ಲಿ ಸ್ಥಳಾವಕಾಶ ಕೊರತೆ ಹಿನ್ನೆಲೆ ಮೈದಾನ ಕಲ್ಪಿಸಲು ಸಾಧ್ಯವಿಲ್ಲ. ಅಗತ್ಯತೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಐವಾನ್ ಡಿಸೋಜಾ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಸುರೇಶ್ ಕುಮಾರ್, ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ನೀಡಲು ಬಯಸುತ್ತೇವೆ. ಪ್ರವಾಸ ಸಂಬಂಧ ಪ್ರವಾಸೋದ್ಯಮ ಇಲಾಖೆ ಜೊತೆ ಚರ್ಚಿಸುತ್ತೇವೆ. ಜ್ಯೋತಿ ಸಂಜೀವಿನಿ ಅತ್ಯಂತ ಕಷ್ಟ. ಅನುದಾನದ ಕೊರತೆ ಇದೆ. ಇದರಿಂದ ಜ್ಯೋತಿ ಸಂಜೀವಿನಿ ಹಾಗೂ ಮಕ್ಕಳಿಗೆ ಶೂ, ಸಾಕ್ಸ್ ನೀಡುವುದು ಆರ್ಥಿಕ ಸ್ಥಿತಿಯಲ್ಲಿ ಕಷ್ಟಸಾಧ್ಯ. ಮುಂದೆ ನೋಡೋಣ ಎಂದು ಭರವಸೆ ಇತ್ತರು. ಶಿಕ್ಷಕರ ಸಂಖ್ಯೆ 10 ಸಾವಿರ ಮಂದಿ ಇರುವ ಹಿನ್ನೆಲೆ ಅದು ಕಷ್ಟವಾಗಲ್ಲ ಎಂದು ಐವಾನ್ ಡಿಸೋಜ ತಿಳಿಸಿದರು.