ಬೆಳಗಾವಿ : ಎರಡು ದಿನಗಳ ಹಿಂದೆ ಬಿಮ್ಸ್ ಆವರಣದಲ್ಲಿದ್ದ ಆ್ಯಂಬುಲೆನ್ಸ್ ಸುಟ್ಟು, ಜಿಲ್ಲಾಸ್ಪತ್ರೆಗೆ ಕಲ್ಲು ಎಸೆದ ದುಷ್ಕರ್ಮಿಗಳು ದೇಶದ್ರೋಹಿಗಳು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಮ್ಸ್ ಎದುರು ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿರುವ ಕೃತ್ಯ ಪೂರ್ವನಿಯೋಜಿತ. ರೋಗಿ ಮೃತಪಟ್ಟ ಅರ್ಧಗಂಟೆಯಲ್ಲಿ ಅಷ್ಟೊಂದು ಜನ ಸೇರಿರುವುದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತದೆ. ಇದರ ಹಿಂದೆ ಯಾವ ಶಕ್ತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು. ಪೊಲೀಸರು, ಇಂಟೆಲಿಜೆನ್ಸ್ ಈ ಕೆಲಸ ಮಾಡಬೇಕು. ಬಿಮ್ಸ್ ವೈದ್ಯರು, ನರ್ಸ್‌ಗಳು ಹೆದರುವ ಅವಶ್ಯಕತೆ ಇಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತೆ ಎಂದು ಆತ್ಮಸ್ಥೈರ್ಯ ತುಂಬಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಜನಕ : ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ 2 ಸಾವಿರ ಕೋಟಿ ಹಗರಣ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ದೇಶದಲ್ಲಿ ಭ್ರಷ್ಟಾಚಾರದ ಜನಕ ಕಾಂಗ್ರೆಸ್. ಭ್ರಷ್ಟಾಚಾರದ ಅಧಿಪತಿ ಯಾರಾದರೂ ಇದ್ರೆ ಅದು ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ಮಾತನಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಇದು ವಾರ್ ಟೈಮ್ ಸಂದರ್ಭ. ಕೊರೊನಾ ವಿಚಾರದಲ್ಲಿ ಜನರ ಆರೋಗ್ಯ ಕಡೆ ಗಮನ ಕೊಡಬೇಕು. ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲ ಪಕ್ಷಗಳು ಜನರ ಆರೋಗ್ಯದ ಬಗ್ಗೆ ಗಮನ ಕೊಡಬೇಕು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಒಳ್ಳೆ ಕೆಲಸ ಮಾಡ್ತಿದಾರೆ. ಇದನ್ನು ಸಹಿಸಿಕೊಳ್ಳದೇ ಚಿಲ್ಲರೆ ರಾಜಕಾರಣ ಮಾಡುತ್ತಿರುವುದು ಹಿರಿಯರಾದ ಸಿದ್ದರಾಮಯ್ಯಗೆ ಇದು ಶೋಭೆ ತರಲ್ಲ. ಸಿದ್ದರಾಮಯ್ಯ, ಡಿಕೆಶಿ ಬೇಕಾದರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ಕೊಳಕು ರಾಜಕಾರಣ ಮಾಡೋದು ಬಿಡಬೇಕು. ದೇಶದ ಅಭಿವೃದ್ಧಿ, ಜನರ ಸಮಸ್ಯೆಗೆ ಪರಿಹಾರ ಕೊಡುವ ಕೆಲಸ ಮಾಡಬೇಕು ಎಂದರು.